ನ್ಯೂಯಾರ್ಕ್: ದೀಪಾವಳಿ ಹಬ್ಬದ ಪ್ರಯುಕ್ತ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದಲ್ಲಿ (ಡಬ್ಲ್ಯೂಟಿಸಿ) ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ.
ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು, 'ಅಮೆರಿಕದ ಅತಿ ಎತ್ತರದ ಕಟ್ಟಡದೊಂದಿಗೆ ದೀಪಾವಳಿಯ ಶುಭಾರಂಭ.
ಬಣ್ಣಗಳಿಂದ ಬೆಳಗುತ್ತಿರುವ ಒನ್ ವರ್ಲ್ಡ್ ಟ್ರೇಡ್ ಸೆಂಟರ್... ಪ್ರಪಂಚದಾದ್ಯಂತ ಬೆಳಗುವ ದೀಪಗಳ ಹಬ್ಬ ಇಲ್ಲಿದೆ!' ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ದೆಹಲಿಯಲ್ಲಿ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ದೀಪಾವಳಿ ಹಬ್ಬದ ಶುಭಾಶಯ ಕೋರುವ ಸಂದರ್ಭದಲ್ಲಿ ಜನಪ್ರಿಯ 'ತೌಬಾ ತೌಬಾ' ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಇದೀಗ ದೀಪಾವಳಿ ಪ್ರಯುಕ್ತ ದೀಪಗಳಿಂದ ಅಲಂಕೃತವಾಗಿರುವ ರಾಯಭಾರ ಕಚೇರಿಯ ಚಿತ್ರವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. 'ನಮ್ಮ ರಾಯಭಾರ ಕಚೇರಿ ಬೆಳಗಿದೆ ಮತ್ತು ನಾವು ದೀಪಾವಳಿಗೆ ಸಿದ್ಧರಾಗಿದ್ದೇವೆ. ನೀವು ಬೆಳಕಿನ ಹಬ್ಬವನ್ನು ಹೇಗೆ ಆಚರಿಸುತ್ತಿದ್ದೀರಿ?' ಎಂದು ಬರೆದುಕೊಂಡಿದ್ದಾರೆ.