ನವದೆಹಲಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಜೈಲಿನಲ್ಲಿರುವಾಗಲೇ ಸಂದರ್ಶನ ನಡೆಸಲು ಅವಕಾಶ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಡಿಎಸ್‌ಪಿಗಳಾದ ಗುರ್ಷರ್ ಸಂಧು ಮತ್ತು ಸಮ್ಮರ್ ವನೀತ್ ಸೇರಿದಂತೆ ಏಳು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
2022ರ ಸೆಪ್ಟೆಂಬರ್ 3 ಮತ್ತು 4ರಂದು ಲಾರೆನ್ಸ್ ಬಿಷ್ಣೋಯಿ ಜೈಲಿನಲ್ಲಿರುವಾಗಲೇ ಸುದ್ದಿ ವಾಹಿನಿಯೊಂದು ಆತನನ್ನು ಮೊಬೈಲ್ ಮೂಲಕ ಸಂದರ್ಶನ ನಡೆಸಿತ್ತು. ಮೊದಲ ಸಂದರ್ಶನದ ವೇಳೆ ಸಂದರ್ಶಕ ಖಾರಾರ್‌ನಲ್ಲಿರುವ ಪಂಜಾಬ್‌ನ ಅಪರಾಧ ತನಿಖಾ ಸಂಸ್ಥೆ (ಸಿಎಐ) ಕಚೇರಿ ಆವರಣದಲ್ಲಿದ್ದರು. ಎರಡನೇ ಸಂದರ್ಶನವನ್ನು ರಾಜಸ್ಥಾನದಿಂದ ಮಾಡಿದ್ದರು. ಕುಟುಕು ಕಾರ್ಯಾಚರಣೆಯ ಭಾಗವಾಗಿ ವಾಹಿನಿಯು ಈ ಸಂದರ್ಶನ ನಡೆಸಿತ್ತು ಎಂದು ಹೇಳಲಾಗಿದೆ.
ವಾಹಿನಿಯು 2023ರ ಮಾರ್ಚ್‌ನಲ್ಲಿ ಸಂದರ್ಶನವನ್ನು ಪ್ರಸಾರ ಮಾಡಿತ್ತು. ನಂತರ ವಿಡಿಯೊವನ್ನು ಯುಟ್ಯೂಬ್, ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿತ್ತು. ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ತನಿಖೆಗಾಗಿ ಪಂಜಾಬ್ ಹರಿಯಾಣ ಹೈಕೋರ್ಟ್ ವಿಶೇಷ ತನಿಖಾ ತಂಡವನ್ನೂ ರಚಿಸಿತ್ತು.
ಮುಂಬೈನ ಬಾಂದ್ರಾದಲ್ಲಿ ಅಕ್ಟೋಬರ್ 12ರಂದು ಎನ್‌ಸಿಪಿ ಮುಖಂಡ ಬಾಬಾ ಸಿದ್ದೀಕಿ ಅವರನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಬಾ ಸಿದ್ದೀಕಿ ಹತ್ಯೆಗೆ ಮುನ್ನ ಶೂಟರ್‌ಗಳು ಲಾರೆನ್ಸ್ ಬಿಷ್ಣೋಯಿಯ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯಿ ಅಲಿಯಾಸ್ ಭಾನು ಜತೆಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಇದೀಗ ಅನ್ಮೋಲ್ ಬಿಷ್ಣೋಯಿ ಬಂಧನಕ್ಕೆ ಜಾಲ ಬೀಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈತನ ಬಗ್ಗೆ ಸುಳಿವು ನೀಡುವವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಶುಕ್ರವಾರ ಘೋಷಿಸಿತ್ತು.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಏಪ್ರಿಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಪ್ರಕರಣದಲ್ಲಿ ಅನ್ಮೋಲ್ ಬಿಷ್ಣೋಯಿಯನ್ನು ಬಂಧಿಸಲು ಎನ್‌ಐಎ ಜಾಲ ಬೀಸಿದೆ. ಅಲ್ಲದೆ, ಅನ್ಮೋಲ್‌ನನ್ನು ಎನ್‌ಐಎ ತನಗೆ ಬೇಕಾಗಿರುವ ಅತ್ಯಂತ ಕುಖ್ಯಾತರ ಪಟ್ಟಿಗೆ ಸೇರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್‌ನ ಫಾಜಿಲ್ಕಾ ಮೂಲದವನಾದ ಅನ್ಮೋಲ್ ಬಿಷ್ಣೋಯಿ ಸದ್ಯ ಕೆನಡಾದಲ್ಲಿ ನೆಲಸಿದ್ದಾನೆ ಮತ್ತು ಅಮೆರಿಕಕ್ಕೆ ಆಗಾಗ ಪ್ರಯಾಣ ಕೈಗೊಳ್ಳುತ್ತಾನೆ ಎಂದು ನಂಬಲಾಗಿದೆ. ಈತನ ಅಣ್ಣ ಲಾರೆನ್ಸ್ ಬಿಷ್ಣೋಯಿ ಸದ್ಯ ಗುಜರಾತ್‌ನ ಸಾಬರಮತಿ ಜೈಲಿನಲ್ಲಿದ್ದಾನೆ.