ನವದೆಹಲಿ: ಹರಿಯಾಣ ಚುನಾವಣೆ ಫಲಿತಾಂಶ ಸ್ವೀಕಾರಾರ್ಹವಲ್ಲ ಎನ್ನುವ ಕಾಂಗ್ರೆಸ್ ಹೇಳಿಕೆಗೆ ಚುನಾವಣಾ ಆಯೋಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
'ದೇಶದ ಸಮೃದ್ಧ ಪ್ರಜಾಪ್ರಭುತ್ವದ ಪರಂಪರೆಯಲ್ಲಿ ಎಂದೂ ಕೇಳದ ಆರೋಪ' ಎಂದು ಆಯೋಗ ಹೇಳಿದೆ. ಇದು ಕಾನೂನುಬದ್ಧ ಮುಕ್ತ ಅಭಿವ್ಯಕ್ತಿಯ ಭಾಗವಲ್ಲ ಎಂದು ನುಡಿದಿದೆ.
ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ಚುನಾವಣಾ ಆಯೋಗವು, ಪಕ್ಷದ ನಾಯಕರಾದ ಜೈರಾಮ್ ರಮೇಶ್ ಹಾಗೂ ಪವನ್ ಖೆರಾ ಅವರ ಇಂಥ ಹೇಳಿಕೆಯು, ಕಾನೂನು ಮತ್ತು ನಿಯಂತ್ರಣ ಚೌಕಟ್ಟಿನ ಪ್ರಕಾರ ವ್ಯಕ್ತಪಡಿಸಲಾದ 'ಜನರ ಇಚ್ಛೆಯನ್ನು ಪ್ರಜಾಸತ್ತಾತ್ಮಕವಲ್ಲದ ರೀತಿಯಲ್ಲಿ ತಿರಸ್ಕಾರ' ಎಂದು ಹೇಳಿದೆ.
ಹರಿಯಾಣದ ಚುನಾವಣಾ ಫಲಿತಾಂಶಗಳನ್ನು 'ಅನಿರೀಕ್ಷಿತ' ಎಂದು ಪರಿಗಣಿಸಿ, ಅದನ್ನು ವಿಶ್ಲೇಷಿಸಲು ತಮ್ಮ ದೂರುಗಳೊಂದಿಗೆ ನಮ್ಮನ್ನು ಸಂಪರ್ಕಿಸಲು ಪಕ್ಷ ಉದ್ದೇಶಿಸಿದೆ ಎಂದು ಖರ್ಗೆ ಮತ್ತು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ ಎಂದು ಆಯೋಗ ತಿಳಿಸಿದೆ.
'ಫಲಿತಾಂಶಗಳು ಸ್ವೀಕಾರಾರ್ಹವಲ್ಲ' ಎಂದು ಹೇಳಿಕೆ ನೀಡಿದವರು ಸೇರಿದಂತೆ 12 ಸದಸ್ಯರ ಕಾಂಗ್ರೆಸ್‌ನ ಅಧಿಕೃತ ನಿಯೋಗ ನಮ್ಮನ್ನು ಭೇಟಿ ಮಾಡಲು ಸಮಯವನ್ನು ಕೋರಿದ ವಿನಂತಿಯನ್ನು ಸ್ವೀಕರಿಸಿದ್ದೇವೆ. ಇಂದು ಸಂಜೆ 6 ಗಂಟೆಗೆ ನಿಯೋಗವನ್ನು ಭೇಟಿ ಮಾಡಲು ಒಪ್ಪಿಗೆ ನೀಡಿದೆ ಎಂದು ಖರ್ಗೆ ಅವರಿಗೆ ಪತ್ರದಲ್ಲಿ ತಿಳಿಸಲಾಗಿದೆ.