ಕೇರಳದ ಪತ್ತನಂತಿಟ್ಟದ ಕೈಪಟ್ಟೂರಿನ ಎಎಂಆರ್ ಆಸ್ಪತ್ರೆ ಎಂದು ಗುರುತಿಸಲಾದ ಸಂಸ್ಥೆಯಲ್ಲಿ ಈ ವೈದ್ಯಕೀಯ ಮೋಸದ ಜಾಲ ಹೊರಬಿದ್ದಿದೆ.
ನಗರದ ಅಡೂರ್ ರಸ್ತೆಯಲ್ಲಿ ಡಾ. ಚಂದ್ರಶೇಖರನ್ ಎಂಬ ನಾಮಫಲಕವಿರುವ ಆಸ್ಪತ್ರೆಯಲ್ಲಿ ಅಸಲಿ ವೈದ್ಯರ ಅನುಪಸ್ಥಿತಿಯಿದ್ದು, ಅವರ ಜಾಗದಲ್ಲಿ ಸಹಾಯಕಿ ನಬೀಸಾ ರೋಗಿಗಳಿಗೆ ಚಿಕಿತ್ಸೆ ಕೊಡುವ ಜವಾಬ್ದಾರಿಯನ್ನು ಹೊತ್ತಿರುವುದು ಅಚ್ಚರಿಯ ಸಂಗತಿ. ಈ ಹಿಂದಿನಿಂದಲೂ ಕ್ಲಿನಿಕ್ನಲ್ಲಿ ಅಸಲಿ ವೈದ್ಯ ಚಂದ್ರಶೇಖರ್ ತಮ್ಮ ವೈದ್ಯ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದ್ರೆ, ಕೆಲವು ತಿಂಗಳಿನಿಂದ ಚಂದ್ರಶೇಖರ್ ಸ್ಥಳದಿಂದ ಕಾಣೆಯಾಗಿದ್ದಾರೆ. ತಾನು ಕೆಲಸ ಮಾಡುತ್ತಿದ್ದ ಕೊಠಡಿಯಲ್ಲಿ ಅವರ ಅನುಪಸ್ಥಿತಿ ಅನೇಕ ರೋಗಿಗಳ ಗಮನಕ್ಕೆ ಬಂದಿತ್ತು. ಈ ಬಗ್ಗೆ ಒಂದಷ್ಟು ಜನ ನಕಲಿ ವೈದ್ಯೆ ನಬೀಸಾಗೆ ಪ್ರಶ್ನಿಸಿದ್ದರು. ಆದ್ರೆ, ಆಕೆಯಿಂದ ಯಾವುದೇ ಸಮಂಜಸವಾದ ಉತ್ತರ ದೊರೆತಿಲ್ಲ.
ಇತ್ತೀಚೆಗೆ ನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರು ಡಾ. ಚಂದ್ರಶೇಖರ್ ಅವರ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ನಬೀಸಾ ಆತನ ಅಸ್ವಸ್ಥತೆಯನ್ನು ನಿವಾರಿಸಲು ಇಂಜೆಕ್ಷನ್ ಕೊಡಲು ಮುಂದಾಗಿದ್ದಳು. ಈ ವೇಳೆ ನಬೀಸಾ ನಡೆಯಿಂದ ಮತ್ತು ಸಲಹೆಗಳಿಂದ ಅನುಮಾನಗೊಂಡ ರೋಗಿಯು, ಸಂಶಯದಿಂದಲೇ ಚುಚ್ಚುಮದ್ದನ್ನು ನಿರಾಕರಿಸಿ, ಮಾತ್ರೆ ಕೊಡಿ ಸಾಕು ಎಂದಿದ್ದಾನೆ. ಆತನ ಕೋರಿಕೆಯಂತೆ ಲೇಬಲ್ ಇಲ್ಲದ ಮೂರು ರೀತಿಯ ಔಷಧಿಯನ್ನು ನೀಡಿದ ನಬೀಸಾ, ಇದು ಕ್ಯಾಲ್ಸಿಯಂ ಮಾತ್ರೆ, ಇದು ನಿಮ್ಮ ಎಲ್ಲಾ ನೋವನ್ನು ನಿವಾರಿಸುತ್ತದೆ ಎಂದು ವಿವರಿಸಿದ್ದಾಳೆ. ಅಲ್ಲಿಂದ ಮಾತ್ರೆಯನ್ನು ನೋಡುತ್ತಲೇ ಶಂಕೆ ವ್ಯಕ್ತಪಡಿಸಿದ ರೋಗಿ, ಕಡೆಗೂ ಆಕೆಯ ಮುಖವಾಡವನ್ನು ಕಳಚಿಡುವಲ್ಲಿ ಯಶಸ್ವಿಯಾಗಿದ್ದಾನೆ.
ಮೂರು ಬಗೆಯ ಮಾತ್ರೆಗಳನ್ನು ನೀಡಿದ್ದಕ್ಕೆ 250 ರೂ. ಕೇಳಿದ ನಬೀಸಾಗೆ, ಇಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರನ್ ಡಾಕ್ಟರ್ ಎಲ್ಲಿ ಹೋದರು? ಅವರು ಏಕೆ ಇಲ್ಲಿಲ್ಲ ಎಂದು ರೋಗಿ ಪ್ರಶ್ನಿಸಿದ್ದಾನೆ. ಈ ಸಂದರ್ಭದಲ್ಲಿ ನನಗೆ ಗೊತ್ತಿಲ್ಲ, ಅವರು ಬೇರೆಡೆ ಹೋಗಿದ್ದಾರೆ ಎಂದು ಆಕೆ ತಿಳಿಸಿದ್ದಾಳೆ. ಈ ಬೆನ್ನಲ್ಲೇ ನಕಲಿ ವೈದ್ಯೆ ಕೊಟ್ಟ ಮಾತ್ರೆಗಳನ್ನು ಹಿಡಿದು ಸಾರ್ವಜನಿಕ ಆಸ್ಪತ್ರೆಗೆ ಹೋದ ರೋಗಿ, ಅಲ್ಲಿದ್ದ ಡಾ. ಶರತ್ ಥಾಮಸ್ ರಾಯ್ ಬಳಿ ಗುಳಿಗೆಯನ್ನು ತೋರಿಸಿ, ಘಟನೆ ವಿವರಿಸಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅವರು, ಗುಲಾಬಿ ಬಣ್ಣದಲ್ಲಿರುವ ಮಾತ್ರೆ ನೋವು ನಿವಾರಕ, ಎರಡನೇಯದ್ದು ಗ್ಯಾಸ್ ರಿಲೀಫ್ ಆಗುವ ಗುಳಿಗೆ ಮತ್ತೊಂದು ಸರಿಯಾದ ಲೇಬಲ್ ಇಲ್ಲದ ಕಾರಣ ಯಾವುದೆಂದು ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ.
ಸೂಕ್ತ ದಾಖಲಾತಿ ಇಲ್ಲದಿರುವುದೇ ಆಸ್ಪತ್ರೆಯ ಪರವಾನಗಿ ನಿರಾಕರಣೆಗೆ ಕಾರಣ ಎಂದು ಪಂಚಾಯತಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕಾಗಿ ನಾವು ಪರವಾನಗಿ ಕೊಟ್ಟಿರಲಿಲ್ಲ. ಇಷ್ಟಾದರೂ ಅಕ್ರಮವಾಗಿ ಇವರು ಆಸ್ಪತ್ರೆ ನಡೆಸಿದ್ದಾರೆ ಎಂದು ದೃಢಪಡಿಸಿದರು. ಇದೇ ರೀತಿಯ ಆರೋಪಗಳಿಂದ ಈ ಆಸ್ಪತ್ರೆ ಮುಚ್ಚುವ ಪರಿಸ್ಥಿತಿಯನ್ನು ತಲುಪಿತ್ತು. ಆದರೆ ನಂತರದಲ್ಲಿ ಮತ್ತೆ ತೆರೆಯಲಾಗಿದೆ. ಅಗ್ಗದ ಚಿಕಿತ್ಸಾ ವೆಚ್ಚ ತಗಲುತ್ತದೆ ಎಂದು ಅನೇಕ ರೋಗಿಗಳು ಈ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.