ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪ್ರತಿಷ್ಠಿತ ನಿಯತಕಾಲಿಕೆ ಫೋರ್ಬ್ಸ್ 2024(Forbes List) ರ ಭಾರತದ 100 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ.
ಅಕ್ಟೋಬರ್ 9 ರಂದು ನಿಧನರಾದ ರತನ್ ಟಾಟಾ ಅವರ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಅವರು ಟಾಟಾ ಸನ್ಸ್‌ನ ಗೌರವಾಧ್ಯಕ್ಷರಾಗಿದ್ದರು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂಡಿ ಮುಖೇಶ್ ಅಂಬಾನಿ 119.5 ಬಿಲಿಯನ್ ಡಾಲರ್ ಅಂದಾಜು ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಈ ವರ್ಷ 27.5 ಬಿಲಿಯನ್ ಡಾಲರ್ ಲಾಭ ಗಳಿಸಿದ್ದಾರೆ. ಆದಾನಿ ಗ್ರೂಪ್ನ ಗೌತಮ್ ಅದಾನಿ ಮತ್ತು ಅವರ ಕುಟುಂಬದ ಸಂಪತ್ತು 116 ಬಿಲಿಯನ್ ಡಾಲರ್ ಆಗಿದ್ದು, ಇವರು ಒಂದು ವರ್ಷದಲ್ಲಿ ಗರಿಷ್ಠ 48 ಬಿಲಿಯನ್ ಡಾಲರ್ ಲಾಭ ಗಳಿಸಿದ್ದಾರೆ.
ಭಾರತದ ಅಗ್ರ 100 ಶ್ರೀಮಂತರ ಒಟ್ಟು ನಿವ್ವಳ ಮೌಲ್ಯವು ಇದೇ ಮೊದಲ ಬಾರಿಗೆ ಒಂದು ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ. ಪ್ರಸ್ತುತ ಇದು 1.1 ಟ್ರಿಲಿಯನ್ ಡಾಲರ್ ತಲುಪಿದೆ. ದೇಶದ ಶೇ.80ಕ್ಕೂ ಹೆಚ್ಚು ಭಾರತೀಯ ಶ್ರೀಮಂತರ ಸಂಪತ್ತು ಇನ್ನಷ್ಟು ಹೆಚ್ಚಿದೆ. ಇವರಲ್ಲಿ 58 ಮಂದಿ ತಮ್ಮ ನಿವ್ವಳ ಮೌಲ್ಯವನ್ನು 1 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿರುವ ಅಗ್ರ 12 ಜನರು ಅಗ್ರ 100 ರ ಒಟ್ಟು ಸಂಪತ್ತಿನ ಅರ್ಧದಷ್ಟು ಹೊಂದಿದ್ದಾರೆ.
ಮೂರನೇ ಸ್ಥಾನದಲ್ಲಿ ಭಾರತದ ಶ್ರೀಮಂತೆ ಸಾವಿತ್ರಿ ಜಿಂದಾಲ್ ಆಗಿದ್ದು, ಅವರ ಅಂದಾಜು ನಿವ್ವಳ ಮೌಲ್ಯವು 43.7 ಬಿಲಿಯನ್ ಡಾಲರ್ ಆಗಿದೆ. 40.2 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಎಚ್ಎಲ್ಸಿ ಎಂಟರ್‌ಪ್ರೈಸ್‌ನ ಶಿವ ನಾಡರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಶಾಂಘ್ವಿ 32.4 ಶತಕೋಟಿ ಡಾಲರ್ ಮೌಲ್ಯದ ನಿವ್ವಳ ಮೌಲ್ಯದೊಂದಿಗೆ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ.
ಟಾಪ್ 10 ರಲ್ಲಿ ಉಳಿದಿರುವ ಕೈಗಾರಿಕೋದ್ಯಮಿಗಳಲ್ಲಿ ರಾಧಾಕಿಶನ್ ದಮಾನಿ (31.5 ಶತಕೋಟಿ ಡಾಲರ್), ಸುನಿಲ್ ಮಿತ್ತಲ್ (30.7 ಬಿಲಿಯನ್ ಡಾಲರ್), ಕುಮಾರ್ ಬಿರ್ಲಾ (24.8 ಶತಕೋಟಿ ಡಾಲರ್), ಸೈರಸ್ ಪೂನವಾಲಾ (24.5 ಶತಕೋಟಿ ಡಾಲರ್) ಮತ್ತು ಬಜಾಜ್ ಕುಟುಂಬ (23.4 ಬಿಲಿಯನ್ ಡಾಲರ್).
ಲಸಿಕೆ ತಯಾರಿಕಾ ಕಂಪನಿ ಬಯೋಲಾಜಿಕಲ್ ಇ ಮುಖ್ಯಸ್ಥೆ ಮಹಿಮಾ ದಾಟ್ಲಾ ಟಾಪ್ 100 ಪಟ್ಟಿಯಲ್ಲಿ ಹೊಸ ಸೇರ್ಪಡೆಯಾಗಿದ್ದಾರೆ. ಇತರ ಹೊಸ ಮುಖಗಳೆಂದರೆ ಹೆಟೆರೊ ಲ್ಯಾಬ್ಸ್‌ನ ಸಂಸ್ಥಾಪಕ ಬಿ ಪಾರ್ಥ ಸಾರಧಿ ರೆಡ್ಡಿ, ಶಾಹಿ ಎಕ್ಸ್‌ಪೋರ್ಟ್ಸ್ ಮಾಲೀಕ ಹರೀಶ್ ಅಹುಜಾ, ಪ್ರೀಮಿಯರ್ ಎನರ್ಜಿ (ಸೋಲಾರ್ ಪ್ಯಾನಲ್ ಮತ್ತು ಮಾಡ್ಯೂಲ್ ತಯಾರಕ) ಸಂಸ್ಥಾಪಕ ಸುರೇಂದ್ರ ಸಲೂಜಾ. ಫಾರ್ಮಾ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳ ಮಾಲೀಕರು ಪಟ್ಟಿಯಲ್ಲಿ ದೊಡ್ಡ ಸ್ಥಾನಗಳನ್ನು ಪಡೆದಿದ್ದಾರೆ.
ಇವರಲ್ಲಿ ಶಾಂಘ್ವಿ, ಸುಧೀರ್ ಮೆಹ್ತಾ ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್‌ನ ಸಮೀರ್ ಮೆಹ್ತಾ, ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್‌ಗಳ ಇರ್ಫಾನ್ ರಜಾಕ್ ಮತ್ತು ಗೋದ್ರೇಜ್ ಕುಟುಂಬ ಸೇರಿದೆ.