ವಿಶ್ವಸಂಸ್ಥೆ: ತನ್ನ ವಿರುದ್ಧ ಇಸ್ರೇಲ್ ನಡೆಸಿದ ದಾಳಿ ಸಂಬಂಧ ತುರ್ತು ಸಭೆ ನಡೆಸುವಂತೆ ಇರಾನ್ ಮಾಡಿದ್ದ ಮನವಿಯ ಅನುಸಾರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು (ಸೋಮವಾರ) ಮಧ್ಯಾಹ್ನ ಸಭೆ ಕರೆದಿದೆ.
ಯುಎನ್‌ಎಸ್‌ಸಿ ಅಧ್ಯಕ್ಷತೆ ವಹಿಸಿಕೊಂಡಿರುವ ಸ್ವಿಟ್ಜರ್‌ಲ್ಯಾಂಡ್, ತುರ್ತು ಸಭೆ ಆಯೋಜನೆ ಬಗ್ಗೆ ಭಾನುವಾರ ಹೇಳಿಕೆ ನೀಡಿದೆ.
ಇರಾನ್ ಮನವಿಯನ್ನು ರಷ್ಯಾ, ಚೀನಾ ಮತ್ತು ಅಲ್ಜೀರಿಯಾ ಬೆಂಬಲಿಸಿವೆ ಎಂದು ತಿಳಿಸಿದೆ.
ಇದೇ ತಿಂಗಳ ಆರಂಭದಲ್ಲಿ ಇಸ್ರೇಲ್ ವಿರುದ್ಧ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇರಾನ್ ಬೆಂಬಲಿತ ಹಿಜ್ಬುಲ್ಲಾ ನಾಯಕರನ್ನು ಲೆಬನಾನ್‌ನಲ್ಲಿ ಹತ್ಯೆ ಮಾಡಿದ ಬಳಿಕ ಈ ದಾಳಿ ಸಂಘಟಿಸಲಾಗಿತ್ತು. ಇದು ಕಳೆದ ಆರು ತಿಂಗಳಲ್ಲಿ, ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೇ ನೇರ ದಾಳಿಯಾಗಿತ್ತು.
ಇದಕ್ಕೆ ಪ್ರತಿಯಾಗಿ ಇರಾನ್‌ನ ಸೇನಾ ನೆಲೆಯನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ಶನಿವಾರ ನಡೆಸಿದ ದಾಳಿಯಲ್ಲಿ ಕನಿಷ್ಠ ಇಬ್ಬರು ಯೋಧರು ಮೃತಪಟ್ಟಿದ್ದರು.