HEALTH TIPS

J&K Assembly Elections 2024 | ಐವರು ಶಾಸಕರ ನಾಮನಿರ್ದೇಶನ; ಕಾಂಗ್ರೆಸ್ ಕಳವಳ

 ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಚಿತ್ರಣ ಸ್ಪಷ್ಟವಾಗಿದೆ. ಆದರೆ ಇದರ ನಡುವೆಯೇ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡುವ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಲೆಫ್ಟಿನೆಂಟ್ ಗವರ್ನರ್‌ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.

90 ಸದಸ್ಯಬಲದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ನೂತನ ಸರ್ಕಾರ ರಚನೆಗೊಳ್ಳುವ ಪೂರ್ವದಲ್ಲೇ ಐವರು ನಾಮನಿರ್ದೇಶಿತ ಸದಸ್ಯರ ನೇಮಕದಿಂದ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆ 95ಕ್ಕೆ ಏರಲಿದೆ. ಆಗ ಸರ್ಕಾರ ರಚನೆಗೆ 48 ಶಾಸಕರ ಬಲ ಅಗತ್ಯವಾಗಲಿದೆ.

ಆದರೆ ಈ ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸುವ ಹಕ್ಕು ಇರಲಿದೆಯೇ ಎಂಬುದರ ಕುರಿತು ಕೇಂದ್ರ ಗೃಹ ಸಚಿವಾಲಯದ ಮಾರ್ಗದರ್ಶನವನ್ನು ಲೆಫ್ಟಿನೆಂಟ್ ಗವರ್ನರ್‌ ನಿರೀಕ್ಷಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


'ಚುನಾವಣಾ ಫಲಿತಾಂಶ ಪ್ರಕಟಗೊಂಡರೂ, ಜನಾದೇಶದ ವಿರುದ್ಧವಾಗಿ ಬಿಜೆಪಿ ತಂತ್ರ ರೂಪಿಸುತ್ತಿದೆ. ಇದು ದುರುದ್ದೇಶಪೂರಿತ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಪಕ್ಷದ ಮುಖಂಡ ಜೈರಾಮ್ ರಮೇಶ್ ಅವರು ಪ್ರತಿಕ್ರಿಯಿಸಿ, 'ಜಮ್ಮು ಮತ್ತು ಕಾಶ್ಮೀರದ ಜನರು ಕಾಂಗ್ರೆಸ್‌ ಹಾಗೂ ನ್ಯಾಷನಲ್ ಕಾನ್ಫರೆನ್ಸ್‌ ಮೈತ್ರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಹೀನಾಯ ಸೋಲು ಅನುಭವಿಸಿದ ಮೇಲೂ, ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡುವ ಕುತಂತ್ರವನ್ನು ಬಿಜೆಪಿ ನಡೆಸುತ್ತಿದೆ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಪ್ರತಿಕ್ರಿಯಿಸಿ, 'ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಮೈತ್ರಿಯು ಐತಿಹಾಸಿಕ ವಿಜಯ ದಾಖಲಿಸಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ನಮ್ಮ ಪ್ರಜಾಪ್ರಭುತ್ವ ಅಪಹರಣವಾಗದಂತೆ ಎಚ್ಚರವಹಿಸುತ್ತಿದ್ದೇವೆ. ಅವರ ಯಾವುದೇ ಕುತಂತ್ರಗಳ ಕುರಿತು ಜಾಗರೂಕರಾಗಿದ್ದೇವೆ. ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕ ಮೇಲೂ ಕೇಂದ್ರ ಹಾಗೂ ಸಾಂಸ್ಥಿಕ ಅಧಿಕಾರದ ದುರುಪಯೋಗವನ್ನು ಸಹಿಸುವುದಿಲ್ಲ' ಎಂದು ಕಟುವಾಗಿ ಹೇಳಿದ್ದಾರೆ.

ನಾಮನಿರ್ದೇಶಿತ ಸದಸ್ಯರ ನೇಮಕ ಕುರಿತು ಪ್ರತಿಕ್ರಿಯಿಸಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ, 'ಐವರು ನಾಮನಿರ್ದೇಶಿತ ಸದಸ್ಯರ ನೇಮಕದ ಅಧಿಕಾರ ಲೆಫ್ಟಿನೆಂಟ್ ಗವರ್ನರ್‌ಗೆ ನೀಡಿರುವುದು ಲಜ್ಜೆಗೆಟ್ಟ ನಿರ್ಧಾರ. ನಾಮನಿರ್ದೇಶನಗೊಂಡ ಐವರೂ ಶಾಸಕರು ಬಿಜೆಪಿಯೊಂದಿಗೆ ಗುರುತಿಸಿಕೊಂಡವರು. ಸರ್ಕಾರ ರಚನೆಗೂ ಪೂರ್ವದಲ್ಲಿ ಇಂಥದ್ದೊಂದು ಲಜ್ಜೆಗೇಡಿ ಕ್ರಮ ಅತ್ಯಂತ ಅವಮಾನಕರ' ಎಂದು ಜರಿದಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಅವರ ಕ್ರಮವನ್ನು ನ್ಯಾಷನಲ್ ಕಾನ್ಫರೆನ್ಸ್‌ನ ಮುಖಂಡ ರತನ್‌ ಲಾಲ್ ಗುಪ್ತಾ ಅವರು ಖಂಡಿಸಿದ್ದಾರೆ. 'ಇದು ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ' ಎಂದಿದ್ದಾರೆ.

2019ರಲ್ಲಿ ಜಾರಿಗೆ ಬಂದ ಜಮ್ಮು ಮತ್ತು ಕಾಶ್ಮೀರ ಪುನರ್‌ರಚನಾ ಕಾಯ್ದೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇಬ್ಬರು ಸದಸ್ಯರನ್ನು ನಾಮನಿರ್ದೇಶನ ಮಾಡುವ ಹಾಗೂ ಅಗತ್ಯ ಸಂಖ್ಯೆಯ ಮಹಿಳಾ ಸದಸ್ಯರು ಇರುವಂತೆ ನೋಡಿಕೊಳ್ಳುವ ಅಧಿಕಾರ ನೀಡಲಾಗಿತ್ತು. ಈ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತಂದು, ಮೂವರು ಹೆಚ್ಚುವರಿ ಸದಸ್ಯರ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚುನಾವಣೋತ್ತರ ಸಮೀಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಸರ್ಕಾರ ರಚನೆಯ ಸುಳಿವು ನೀಡಲಾಗಿತ್ತು. ಆದರೆ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾಂಗ್ರೆಸ್‌ ಮೈತ್ರಿಯು ಸ್ಪಷ್ಟ ಬಹುಮತ ಪಡೆದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries