ಜಮ್ಮು ಮತ್ತು ಕಾಶ್ಮೀರದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 52 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈಕೂತ್ರಿಕೂಟ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ.
ಒಮರ್ ಅಬ್ದುಲ್ಲಾ ಮುಂದಿನ ಸಿಎಂ
ಬುಡಗಾಮ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎನ್‌ಸಿ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಘೋಷಣೆ ಮಾಡಿದ್ದಾರೆ.
ಬುಡಗಾಮ್ ಮಾತ್ರವಲ್ಲ ಗಂಡೇರ್‌ಬಲ್ ಕ್ಷೇತ್ರದಲ್ಲೂ ಒಮರ್ ಗೆಲುವಿನ ನಗೆ ಬೀರಿದ್ದಾರೆ.
10 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 62 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಆ ಪೈಕಿ ಕೇವಲ 10 ಸ್ಥಾನಗಳಲ್ಲಿ ಗೆಲವು ಕಂಡ ಬಿಜೆಪಿ 19 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸ್ವತಂತ್ರ ಅಭ್ಯರ್ಥಿಗಳಿಗೆ ಗೆಲುವಿನ ಸಂಭ್ರಮ
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಂದರ್‌ವಾಲ್ ಕ್ಚೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಪಯಾರೆ ಲಾಲ್ ಶರ್ಮಾ ಅವರು ಹಿರಿಯ ನಾಯಕ ಗುಲಾಮ್ ಮೊಹಮ್ಮದ್ ಸರೋರಿ ಅವರನ್ನು ಹಿಂದಿಕ್ಕಿ 643 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಬನಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಡಾ. ರಾಮೇಶ್ವರ ಸಿಂಗ್ ಅವರು ಬಿಜೆಪಿ ಅಭ್ಯರ್ಥಿ ಜೆವಾನ್ ಲಾಲ್ ಅವರನ್ನು 2,048 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಸುರನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ನ್ಯಾಷನಲ್ ಕಾನ್ಫರೆನ್ಸ್‌ನ ಬಂಡಾಯ ಅಭ್ಯರ್ಥಿ ಚೌಧರಿ ಮೊಹಮ್ಮದ್ ಅಕ್ರಮ್ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾನ್ವಾಜ್ ಅವರನ್ನು 8,851 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ,
ಖಾತೆ ತೆರೆದ ಎಎಪಿ
ಜಮ್ಮು ಮತ್ತು ಕಾಶ್ಮೀರದ ದೋಡಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಮೆಹರಾಜ್ ಮಲ್ಲಿಕ್ ಜಯ ಸಾಧಿಸಿದ್ದಾರೆ. ಈ ಮೂಲಕ ಎಎಪಿ ಈ ಬಾರಿ ಮೊದಲ ಗೆಲುವು ಸಾಧಿಸಿದೆ.
ಬಿಜೆಪಿಯ ಗಜಯ್ ಸಿಂಗ್ ರಾಣಾ ವಿರುದ್ಧ 4,538 ಮತಗಳ ಅಂತರದಲ್ಲಿ ಮೆಹರಾಜ್ ಗೆದ್ದಿದ್ದಾರೆ.
ಜಮ್ಮು- ಕಾಶ್ಮೀರ ಫಲಿತಾಂಶದಿಂದ ಕೇಂದ್ರ ಸರ್ಕಾರ ಪಾಠ ಕಲಿಯಲಿ
ಜಮ್ಮು ಮತ್ತು ಕಾಶ್ಮೀರದ ಚುನಾವಣೆಯ ಫಲಿತಾಂಶದಿಂದ ಕೇಂದ್ರ ಸರ್ಕಾರ ಪಾಠ ಕಲಿಯಬೇಕು. ಮುಂಬರುವ ದಿನಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್- ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಕೂಡದು ಎಂದು ಪಿಡಿಪಿ ಅಧ್ಯಕ್ಷೆ ಮೆಹಮೂಬ ಮುಫ್ತಿ ಹೇಳಿದ್ದಾರೆ.
ಇದೇ ವೇಳೆ ಗೆಲುವು ಸಾಧಿಸಿರುವ ಎನ್‌ಸಿಯ ನಾಯಕರಿಗೆ ಅಭಿನಂದನೆ ಸಲ್ಲಿಸಿರುವ ಮುಫ್ತಿ, ತಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಉಳಿಯಲಿದೆ ಎಂದಿದ್ದಾರೆ.