ತಿರುವನಂತಪುರಂ: 'ಮಲಪ್ಪುರದ ಕರಿಪ್ಪೂರ್ ವಿಮಾನನಿಲ್ದಾಣದಲ್ಲಿ ಕಳ್ಳಸಾಗಣೆ ಭಾಗಿಯಾಗುವವರ ಪೈಕಿ ಬಹುತೇಕ ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು' ಎಂದು ಎಡಪಕ್ಷದ ಶಾಸಕ ಕೆ.ಟಿ.ಜಲೀಲ್ ಅವರು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಈ ಹೇಳಿಕೆಗೆ ಐಯುಎಂಲ್ ಹಾಗೂ ಎಡಪಕ್ಷದ ಬಂಡಾಯ ಶಾಸಕ ಪಿ.ವಿ.ಅನ್ವರ್ ಕಿಡಿಕಾರಿದ್ದಾರೆ.
ಫೇಸ್‌ಬುಕ್‌ನಲ್ಲಿ ವಿವರವಾಗಿ ಬರೆದಿರುವ ಜಲೀಲ್ ಅವರು, 'ಚಿನ್ನ ಕಳ್ಳಸಾಗಣೆ ಹಾಗೂ ಹವಾಲಾ ಅಪರಾಧದಲ್ಲಿ ಭಾಗಿಯಾಗುವವರಲ್ಲಿ ಬಹುಪಾಲು ಮಂದಿ ಮುಸ್ಲಿಂ ಸಮುದಾಯದವರು. ಇಂತಹ ಯಾವುದೇ ಚಟುವಟಿಕೆಗಳು ಕೂಡ 'ಧಾರ್ಮಿಕವಲ್ಲ'. ಈ ವಿಚಾರದಲ್ಲಿ ಸಮುದಾಯದ ಮುಖಂಡರು ಮಧ್ಯಪ್ರವೇಶಿಸಿ, ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಜಾಗೃತಿ ಮೂಡಿಸಬೇಕು' ಎಂದು ಸಲಹೆ ನೀಡಿದ್ದಾರೆ.
'ಯಾವುದೇ ಸಮುದಾಯದವರು ತಪ್ಪು ಮಾಡಿದ್ದರೆ, ಸಮುದಾಯದ ಸದಸ್ಯರು ಕಟುವಾಗಿ ವಿರೋಧಿಸಬೇಕು. ಕ್ರೈಸ್ತರು ತಪ್ಪು ಮಾಡಿದರೆ, ಆ ಸಮುದಾಯದವರು ವಿರೋಧಿಸಬೇಕು. ಮುಸಲ್ಮಾನರು ತಪ್ಪು ಮಾಡಿದ ವೇಳೆ ಸಮುದಾಯದವರು ಖಂಡಿಸಬೇಕು. ಹಿಂದೂ ಸಮುದಾಯದಲ್ಲಿ ತಪ್ಪುಗಳು ನಡೆದಾಗ, ಅದನ್ನು ಆ ಸಮುದಾಯವರು ಅದನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ, ಇತರೆ ಧರ್ಮಗಳನ್ನು ಕೀಳುಮಟ್ಟದಲ್ಲಿ ನೋಡುವ ಪ್ರಯತ್ನಗಳು ನಡೆಯುತ್ತವೆ' ಎಂದು ವಿವರಿಸಿದ್ದಾರೆ.
'ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಮಲಪ್ಪುರ ಕುರಿತು ಸದಾಭಿಪ್ರಾಯ ಹೊಂದಲು ಹೇಗೆ ಸಾಧ್ಯ? ಇಂತಹ ವಿಚಾರ ಹೇಳಿದ ತಕ್ಷಣ ಕೆಲವರು ಏಕೆ ಹತಾಶೆಗೊಳ್ಳುತ್ತಾರೆ ಎಂದು ಅರ್ಥವಾಗುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.
ಖಂಡನೆ: ಜಲೀಲ್ ಹೇಳಿಕೆಯು 'ಅತ್ಯಂತ ಅವಹೇಳನಕಾರಿಯಾದುದು' ಎಂದು ಇಂಡಿಯುನ್ ಯೂನಿಯನ್ ಮುಸ್ಲಿಂ ಲೀಗ್ ಕಿಡಿಕಾರಿದೆ.
'ಮುಸ್ಲಿಂ ಸಮುದಾಯದವರು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಎಲ್ಲಿಂದ ಸಿಕ್ಕಿತು? ಯಾವ ಆಧಾರದ ಮೇಲೆ ಈ ರೀತಿ ಹೇಳುತ್ತಿದ್ದಾರೆ. ಜಲೀಲ್ ಹತಾಶೆಗೊಂಡಿರಬಹುದು. ಆದರೆ, ಇಡೀ ಸಮುದಾಯಕ್ಕೆ ಕಳಂಕ ತರುವ ಪ್ರಯತ್ನವನ್ನು ಮಾಡಬಾರದು' ಎಂದು ಹಿರಿಯ ಮುಖಂಡ ಪಿ.ಎಂ.ಎ. ಸಲಾಂ ಪ್ರಶ್ನಿಸಿದ್ದಾರೆ.
ಜಲೀಲ್ ಹೇಳಿಕೆಯು ಸಾರ್ವಜನಿಕ ಜೀವನದಲ್ಲಿ 'ಅತ್ಯಂತ ಕೆಟ್ಟ ನಡೆ' ಎಂದು ಎಡಪಕ್ಷ ಬಂಡಾಯ ಶಾಸಕ ಅನ್ವರ್ ತಿಳಿಸಿದ್ದಾರೆ.