ನವದೆಹಲಿ: ಭಾರತ ಹಾಗೂ ಚೀನಾ ಎಲ್ಎಸಿಯಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ವಿಷಯವಾಗಿ ಉಭಯ ದೇಶಗಳು ಒಪ್ಪಂದಕ್ಕೆ ಮುಂದಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸೀಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ.
2020ರ ಗಲ್ವಾನ್ ನಲ್ಲಿನ ದಾಳಿಯ ನಂತರ ಉಂಟಾಗಿದ್ದ ವಿವಾದಗಳ ವಿಷಯಗಳು ಇತ್ಯರ್ಥಗೊಳ್ಳುತ್ತಿರುವ ಫಲಿತವಾಗಿ ಈ ದ್ವಿಪಕ್ಷೀಯ ಮಾತುಕತೆಗೆ ಸಿದ್ಧತೆಗಳು ನಡೆದಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಉಭಯ ದೇಶಗಳ ನಡುವಿನ ಒಪ್ಪಂದ 2020 ರಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ರಷ್ಯಾದ ಕಜನ್ ನಲ್ಲಿ ಆಯೋಜನೆಗೊಳ್ಳಲಿರುವ 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (16th BRICS Summit) ನರೇಂದ್ರ ಮೋದಿ- ಜಿನ್ಪಿಂಗ್ ಭೇಟಿಯಾಗುವ ಸಾಧ್ಯತೆಗಳಿವೆ.
ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇರಾನ್ ಅಧ್ಯಕ್ಷ ಡಾ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
"ಕಳೆದ ಹಲವಾರು ವಾರಗಳಲ್ಲಿ, ಭಾರತ ಮತ್ತು ಚೀನಾದ ರಾಜತಾಂತ್ರಿಕ ಮತ್ತು ಮಿಲಿಟರಿ ಸಮಾಲೋಚಕರು ವಿವಿಧ ವೇದಿಕೆಗಳಲ್ಲಿ ಪರಸ್ಪರ ನಿಕಟ ಸಂಪರ್ಕದಲ್ಲಿದ್ದಾರೆ. ಈ ಚರ್ಚೆಗಳ ಪರಿಣಾಮವಾಗಿ, LAC ಉದ್ದಕ್ಕೂ ಗಸ್ತು ವ್ಯವಸ್ಥೆಗಾಗಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಮತ್ತು ಇದು ಸೇನೆಯನ್ನು ಹಿಂತೆಗೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ ಮತ್ತು 2020 ರಲ್ಲಿ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕೂ ನೆರವಾಗಲಿದೆ ನಾವು ಈ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಸೋಮವಾರ ಪ್ರಧಾನಿ ಮೋದಿ ಕಜಾನ್‌ಗೆ ತೆರಳುವ ಮುನ್ನ ಮಿಸ್ರಿ ಹೇಳಿದ್ದಾರೆ.
ಕಳೆದ ತಿಂಗಳು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಚೀನಾದೊಂದಿಗೆ ಇರುವ "ಸೇನಾ ಹಿಂತೆಗೆತದ ಸಮಸ್ಯೆಗಳ" ಪೈಕಿ ಸರಿಸುಮಾರು 75 ಪ್ರತಿಶತದಷ್ಟು ಬಗೆಹರಿದಿವೆ ಆದರೆ ಗಡಿಯಲ್ಲಿ ಹೆಚ್ಚುತ್ತಿರುವ ಮಿಲಿಟರೀಕರಣವಾಗಿದೆ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದರು.
ಕ್ಸಿ ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಚೀನಾ ಕಳೆದ ಶುಕ್ರವಾರ ಘೋಷಿಸಿತ್ತು.
ಪ್ರಧಾನಿ ಮೋದಿ ಮಂಗಳವಾರ ಕಜಾನ್‌ಗೆ ತೆರಳಲಿದ್ದು, ಅಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಾಯಕರು ಭೋಜನಕೂಟದಲ್ಲಿ ಭೇಟಿಯಾಗಲಿದ್ದಾರೆ. 23ರಂದು (ಬುಧವಾರ) 16ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಅಂತ್ಯದಲ್ಲಿ 10 ಹೊಸ ಸದಸ್ಯರು ಮತ್ತು 10 ಪಾಲುದಾರರನ್ನು ಘೋಷಿಸುವ ಸಾಧ್ಯತೆಯಿದೆ.