ಮುಂಬೈ: ನಗರದ ಘಾಟ್‌ಕೋಪರ್‌ನಲ್ಲಿ ಬೃಹತ್ ಜಾಹೀರಾತು ಫಲಕ ಉರುಳಿ ಬಿದ್ದ ಪ್ರಕರಣದ ಪ್ರಮುಖ ಆರೋಪಿ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ.ಎಂ. ಪತಾಡಿ ಅವರು ಭಿಂಡೆಗೆ ಜಾಮೀನು ಮಂಜೂರು ಮಾಡಿದ್ದಾರೆ.
'ಇದೊಂದು 'ದೇವರ ಕೃತ್ಯ', ದುರದೃಷ್ಟಕರ ಘಟನೆಯಾಗಿದ್ದು, ರಾಜಕೀಯ ಸೇಡಿನಗಾಗಿ ಭವೇಶ್ ಭಿಂಡೆ ಅವರನ್ನು ಸಿಲುಕಿಸಲಾಗಿದೆ' ಎಂದು ಭಿಂಡೆ ಪರ ವಕೀಲ ಸನಾ ಖಾನ್ ವಾದ ಮಂಡಿಸಿದ್ದಾರೆ.
'ಘಾಟ್‌ಕೋಪರ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಜಾಹೀರಾತು ಫಲಕವು ಅನಿರೀಕ್ಷಿತ, ವೇಗವಾಗಿ ಗಾಳಿ ಬಿಸಿದ್ದರಿಂದ ಉರುಳಿ ಬಿದ್ದಿದೆ. ಜಾಹೀರಾತು ಫಲಕವನ್ನು ಅಳವಡಿಸಿದ ಸಂದರ್ಭದಲ್ಲಿ ಭಿಂಡೆ ಅವರು ಸಂಸ್ಥೆಯ ನಿರ್ದೇಶಕರಾಗಿರಲಿಲ್ಲ. ಹಾಗಾಗಿ ಪ್ರಕರಣದಲ್ಲಿ ಭವೇಶ್ ಭಿಂಡೆ ಅವರದ್ದು ಯಾವುದೇ ಪಾತ್ರವಿಲ್ಲ' ಎಂದು ಖಾನ್ ವಿವರಿಸಿದ್ದಾರೆ.
ಭಿಂಡೆ ಅವರ ಇಗೊ ಮಿಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ 120 ಅಡಿ ಅಗಲ ಮತ್ತು 120 ಅಡಿ ಎತ್ತರದ ಬೃಹತ್ ಜಾಹೀರಾತು ಫಲಕವು ಭಾರಿ ಧೂಳು ಸಹಿತ ಬಿರುಗಾಳಿ ಮಳೆಯಿಂದಾಗಿ ಮೇ 13ರಂದು ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದಿತ್ತು. ಈ ವೇಳೆ ಅದರ ಅಡಿಯಲ್ಲಿ ಸಿಲುಕಿದ್ದ 17 ಜನರು ಸಾವಿಗೀಡಾಗಿದ್ದರು.
ಘಟನೆ ಬಳಿಕ ಭಿಂಡೆ ಪರಾರಿಯಾಗಿದ್ದರು. ಪೊಲೀಸರು ಅವರ ಮೇಲೆ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಮೇ 16ರಂದು ರಾಜಸ್ಥಾನದಲ್ಲಿ ಉದಯಪುರದಲ್ಲಿ ಭಿಂಡೆ ಅವರನ್ನು ಬಂಧಿಸಿ ಕರೆತರಲಾಗಿತ್ತು.
ಮುಂಬೈ ನಗರದಾದ್ಯಂತ ಸಂಸ್ಥೆಯು ಅಳವಡಿಸಿರುವ ಇತರ ಜಾಹೀರಾತು ಫಲಕಗಳ ಕುರಿತೂ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಭಿಂಡೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.