ನವದೆಹಲಿ: 'ವೈದ್ಯಕೀಯ ಕೋರ್ಸ್‌ಗೆ ಸೀಟು ದಕ್ಕಿಸಿಕೊಳ್ಳುವ ಉದ್ದೇಶದಿಂದ 144 ಆಕಾಂಕ್ಷಿಗಳು ನೀಟ್-ಯುಜಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಹಾಗೂ ಅದರಲ್ಲಿರುವ ಉತ್ತರಕ್ಕೆ ಹಣ ನೀಡಿದ್ದರು' ಎಂದು ಸಿಬಿಐ ಸೋಮವಾರ ಹೇಳಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪ ಪಟ್ಟಿಯನ್ನು ಸೋಮವಾರ ಸಲ್ಲಿಸಿದ ಸಿಬಿಐ, 'ಜಾರ್ಖಂಡ್‌ನ ಹಝಾರಿಬಾಗ್‌ನ ಓಯಸಿಸ್ ಶಾಲೆಯಿಂದ ಪಂಕಜ್ ಕುಮಾರ್ ಎಂಬಾತ ಪ್ರಶ್ನೆಪತ್ರಿಕೆಯನ್ನು ಕದ್ದಿದ್ದ.
ಪರೀಕ್ಷೆಯ ದಿನವಾದ ಮೇ 5ರಂದು ಪ್ರಶ್ನೆ ಪತ್ರಿಕೆಗಳಿದ್ದ ಟ್ರಂಕ್ ಶಿಕ್ಷಣ ಸಂಸ್ಥೆಗೆ ತಂದ ಸಂದರ್ಭದಲ್ಲಿ ಸೋರಿಕೆ ಮಾಡಿದ್ದಾರೆ ಎಂದು 5,500 ಪುಟಗಳ ಆರೋಪ ಪಟ್ಟಿಯಲ್ಲಿ ಸಿಬಿಐ ಉಲ್ಲೇಖಿಸಿದೆ. ಇದಕ್ಕೆ ಸಂಬಂಧಿಸಿದಂತೆ 298 ಸಾಕ್ಷಿಗಳನ್ನು, 290 ದಾಖಲೆಗಳು ಹಾಗೂ 45 ಸ್ವತ್ತುಗಳನ್ನು ದಾಖಲಿಸಿದೆ.
'ಪಂಕಜ್ ಕುಮಾರ್ ಜಮ್‌ಷೆಡ್ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 2017ರ ತಂಡದ ಎಂಜಿನಿಯರಿಂಗ್ ವಿದ್ಯಾರ್ಥಿ. ಈತ ಟ್ರಂಕ್ ಇಟ್ಟಿರುವ ಭದ್ರತಾ ಕೊಠಡಿಗೆ ತೆರಳಿ, ಅದನ್ನು ತೆರೆದು ಪ್ರಶ್ನೆಪತ್ರಿಕೆಯ ಚಿತ್ರಗಳನ್ನು ಮೊಬೈಲ್‌ನಲ್ಲಿ ತೆಗೆದಿದ್ದ. ಇದಕ್ಕೆ ಬಳಸಿದ್ದ ಸಾಧನಗಳನ್ನು ಸಿಬಿಐ ವಶಪಡಿಸಿಕೊಂಡಿದೆ' ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
'ಹಝಾರಿಬಾಗ್ ಅತಿಥಿ ಗೃಹದಲ್ಲಿ ಕರಣ್ ಜೈನ್, ಕುಮಾರ್ ಶಾನು, ರಾಹುಲ್ ಆನಂದ್, ಚಂದನ್ ಸಿಂಗ್, ಸುರಭಿ ಕುಮಾರಿ, ದೀಪೇಂದ್ರ ಶರ್ಮಾ, ರೌನಕ್ ರಾಜ್, ಸಂದೀಪ್ ಕುಮಾರ್ ಹಾಗೂ ಅಮಿತ್ ಕುಮಾರ್ ಈ ಪತ್ರಿಕೆಗಳಿಗೆ ಉತ್ತರ ಬರೆದಿದ್ದರು. ಇದೇ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಯ ಚಿತ್ರಗಳನ್ನು ಇತರ ಕೇಂದ್ರಗಳಿಗೆ ಕಳುಹಿಸಲಾಗಿತ್ತು. ಮುಂಗಡವಾಗಿ ಹಣ ನೀಡಿದವರಿಗೆ ಮಾತ್ರ ಈ ಕೇಂದ್ರಗಳಿಗೆ ತೆರಳಲು ಅವಕಾಶ ನೀಡಲಾಗಿತ್ತು' ಎಂದು ಸಿಬಿಐನ ಮೂಲಗಳು ತಿಳಿಸಿವೆ.
'ಪಟ್ನಾದ ವಿದ್ಯಾರ್ಥಿನಿಲಯವೊಂದರಲ್ಲಿ ಅರೆ ಸುಟ್ಟ ಪತ್ರಿಕೆಯ ಚೂರು ಲಭ್ಯವಾಗಿತ್ತು. ಪ್ರಶ್ನೆಪತ್ರಿಕೆ ಪಡೆಯಲು ಮುಂಗಡ ಹಣ ನೀಡಿದವರು ಇಲ್ಲಿಯೇ ಇದ್ದರು. ಇವರು ಓಯಸಿಸ್ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು' ಎಂದು ಸಿಬಿಐ ಹೇಳಿದೆ.
ಈ ಪ್ರಕರಣದಲ್ಲಿ ಈವರೆಗೂ 49 ಆರೋಪಿಗಳನ್ನು ಬಂಧಿಸಿದೆ. ಈವರೆಗೂ ಸಲ್ಲಿಸಿರುವ ಮೂರು ಆರೋಪ ಪಟ್ಟಿಗಳಲ್ಲಿ 40 ಜನರ ಹೆಸರನ್ನು ಸಿಬಿಐ ಉಲ್ಲೇಖಿಸಿದೆ.