ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಾರ್ಯವಿಧಾನವನ್ನು ಪರಿಶೀಲಿಸಿ, ಪರೀಕ್ಷೆಗಳಲ್ಲಿ ಸುಧಾರಣೆ ತರಲು ಅಗತ್ಯವಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ನೇಮಕ ಮಾಡಿರುವ ಏಳು ಸದಸ್ಯರ ಸಮಿತಿಗೆ ಸುಪ್ರೀಂ ಕೋರ್ಟ್ ಹೆಚ್ಚುವರಿಯಾಗಿ ಎರಡು ವಾರ ಸಮಯ ನೀಡಿದೆ.

ಎನ್‌ಟಿಎ ಕಾರ್ಯವಿಧಾನವನ್ನು ಪರಿಶೀಲಿಸಿ, ಪರೀಕ್ಷೆಗಳಲ್ಲಿ ಸುಧಾರಣೆ ತರಲು ಅಗತ್ಯವಿರುವ ಶಿಫಾರಸುಗಳನ್ನು ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದ ಈ ಸಮಿತಿಯ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 2ರ ಆದೇಶದಲ್ಲಿ ಹಿಗ್ಗಿಸಿದೆ. ನೀಟ್-ಯುಜಿ ಪರೀಕ್ಷೆಯನ್ನು ವಿವಾದಗಳು ಇಲ್ಲದಂತೆ ನಡೆಸುವ ಉದ್ದೇಶದಿಂದ ಕೋರ್ಟ್ ಈ ಸೂಚನೆ ನೀಡಿತ್ತು.
2024ರ ನೀಟ್-ಯುಜಿ ಪರೀಕ್ಷೆಯನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು. ಪ್ರಶ್ನೆಪತ್ರಿಕೆಗಳ ಸೋರಿಕೆಯು ವ್ಯವಸ್ಥಿತವಾಗಿ ಆಗಿದೆ ಎಂಬುದನ್ನು ತೋರಿಸಲು ಅಗತ್ಯ ಆಧಾರಗಳು ಇಲ್ಲ ಎಂದು ಅದು ಸ್ಪಷ್ಟಪಡಿಸಿತು.
ಸಮಿತಿಯು ವರದಿ ಸಲ್ಲಿಸಲು ನಿಗದಿ ಮಾಡಿರುವ ದಿನಾಂಕ ಸಮೀಪಿಸುತ್ತಿದೆ. ಹೀಗಾಗಿ, ಗಡುವನ್ನು ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಮನವಿ ಸಲ್ಲಿಸಿದರು.
ಸಮಿತಿಯ ವರದಿಯು ಬಹುತೇಕ ಸಿದ್ಧವಾಗಿದೆ ಎಂಬುದನ್ನು ಪರಿಗಣಿಸಿ, ಹೆಚ್ಚುವರಿಯಾಗಿ ಎರಡು ವಾರಗಳ ಸಮಯವನ್ನು ಪೀಠವು ನೀಡಿತು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿ ಇದ್ದಾರೆ.