ನವದೆಹಲಿ: ವೈವಾಹಿಕ ಅತ್ಯಾಚಾರ ಸಂಬಂಧ ಪತಿಗೆ ನೀಡಲಾಗಿರುವ ಕಾನೂನು ರಕ್ಷಣೆಯನ್ನು ಪ್ರಶ್ನಿಸಿ ಸಲ್ಲಿಸಿಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನಾಲ್ಕು ವಾರ ಮುಂದೂಡಿದ್ದಾರೆ.
ನವೆಂಬರ್ 10ರಂದು ಚಂದ್ರಚೂಡ್ ಅವರು ನಿವೃತ್ತರಾಗಲಿದ್ದಾರೆ.
ಈ ಸಂಬಂಧ ಅರ್ಜಿದಾರರ ಪರ ಎಲ್ಲಾ ವಕೀಲರಿಗೆ ತಮ್ಮ ವಾದ ಮಂಡಿಸಲು ಸಮಯ ನೀಡಲಾಗುವುದು ಎಂದು ಚಂದ್ರಚೂಡ್ ಹೇಳಿದ್ದಾರೆ.
ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲ ಹಾಗೂ ಮನೋಜ್ ಮಿಶ್ರಾ ಅವರೂ ಇದ್ದರು. ವಿಚಾರಣೆಯನ್ನು ಮುಂದೂಡಲಾಯಿತಲ್ಲದೆ, ಹೊಸ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಲಿದೆ ಎಂದು ಹೇಳಿದ್ದಾರೆ.
ಅಪ್ರಾಪ್ತೆಯಲ್ಲದ ಹೆಂಡತಿಯೊಂದಿಗೆ ವಿವಾಹದ ಬಳಿಕ ದೈಹಿಕ ಸಂಬಂಧ ಹೊಂದುವುದು ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್‌ಎಸ್) ಅಪರಧವಲ್ಲ ಎನ್ನುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 17ರಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು.
ಅಪ್ರಾಪ್ತೆಯಲ್ಲದ ಪತ್ನಿ ಜೊತೆಗೆ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಾಚಾರವಲ್ಲ ಎಂದು ಐಪಿಸಿಯ ಸೆಕ್ಷನ್ 375ರಲ್ಲಿ ಹೇಳಲಾಗಿದೆ.
ಹೊಸದಾಗಿ ಜಾರಿಯಾದ ಬಿಎನ್‌ಎಸ್‌ನ ಸೆಕ್ಷನ್ 63 (ಅತ್ಯಾಚಾರ) '18 ವರ್ಷಕ್ಕಿಂತ ಮೇಲ್ಪಟ್ಟ ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಅಥವಾ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರವಲ್ಲ' ಎಂದು ಹೇಳುತ್ತದೆ.
ವೇಗವಾಗಿ ಬೆಳೆಯುತ್ತಿರುವ ಹಾಗೂ ಬದಲಾಗುತ್ತಿರುವ ಸಾಮಾಜಿಕ ಹಾಗೂ ಕೌಟುಂಬಿಕ ರಚನೆಯಲ್ಲಿ, ತಿದ್ದುಪಡಿ ಮಾಡಲಾದ ನಿಯಮಗಳನ್ನು ದುರುಪಯೋಗ ಪಡಿಸುವುದನ್ನು ತಳ್ಳಿಹಾಕಲಾಗುವುದಿಲ್ಲ. ಏಕೆಂದರೆ ಒಬ್ಬ ವ್ಯಕ್ತಿಗೆ ಸಮ್ಮತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸಲು ಕಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಹೇಳಿದೆ.