ನವದೆಹಲಿ: ಅಸ್ಸಾಂಗೆ ವಲಸೆ ಬಂದಿರುವವರಿಗೆ ಪೌರತ್ವ ನೀಡುವ, ಭಾರತೀಯ ಪೌರತ್ವ ಕಾಯ್ದೆಯ 'ಸೆಕ್ಷನ್ 6ಎ'ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್ ಗುರುವಾರ ಬಹುಮತದ ತೀರ್ಪು ನೀಡಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರು ಇದ್ದ ಸಂವಿಧಾನ ಪೀಠವು 4:1 ರ ತೀರ್ಪು ನೀಡಿದ್ದು, 'ಸೆಕ್ಷನ್ 6ಎ'ದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.
ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ.ಎಂ.ಸುಂದ್ರೇಶ್ ಹಾಗೂ ಮನೋಜ್ ಮಿಶ್ರಾ ಅವರು 'ಸೆಕ್ಷನ್ 6ಎ'ದ ಸಿಂಧುತ್ವ ಎತ್ತಿ ಹಿಡಿದಿದ್ದರೆ, ಭಿನ್ನ ನಿಲುವು ತಳೆದಿರುವ ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ, 'ಈ ಸೆಕ್ಷನ್ ಅಸಾಂವಿಧಾನಿಕ' ಎಂದು ಹೇಳಿದ್ದಾರೆ.
'ಅಸ್ಸಾಂ ಒಪ್ಪಂದವು ಅಕ್ರಮ ವಲಸೆ ಸಮಸ್ಯೆಗೆ ಕಂಡುಕೊಂಡ ರಾಜಕೀಯ ಪರಿಹಾರವಾದರೆ, ಸೆಕ್ಷನ್ 6ಎ ಶಾಸನಾತ್ಮಕ ಪರಿಹಾರವಾಗಿದೆ' ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
'ಇತರ ದೇಶಗಳಿಂದ ಭಾರತಕ್ಕೆ ವಲಸೆ ಬರುವುದನ್ನು ತಗ್ಗಿಸಬೇಕು ಹಾಗೂ ಅದಾಗಲೇ ವಲಸೆ ಬಂದಿರುವವರಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಮಾಡುವ ಉದ್ಧೇಶದಿಂದ ಸೆಕ್ಷನ್ 6ಎ ಅನ್ನು ಸೇರಿಸಲಾಗಿದೆ' ಎಂದು ತಾವೇ ಬರೆದ ತೀರ್ಪಿನಲ್ಲಿ ಸಿಜೆಐ ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಸುಂದ್ರೇಶ್ ಹಾಗೂ ಮನೋಜ್ ಮಿಶ್ರಾ ಅವರು ಸಿಜೆಐ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. 'ಸೆಕ್ಷನ್ 6ಎ' ದ ಸಿಂಧುತ್ವ ಎತ್ತಿ ಹಿಡಿದಿದ್ದರೂ, ನ್ಯಾಯಮೂರ್ತಿ ಸೂರ್ಯಕಾಂತ್ ಪ್ರತ್ಯೇಕ ತೀರ್ಪು ಬರೆದಿದ್ದಾರೆ.
ಸ್ವಯಂ ಸೇವಾ ಸಂಸ್ಥೆಗಳಾದ ಅಸ್ಸಾಂ ಪಬ್ಲಿಕ್ ವರ್ಕ್ಸ್, ಅಸ್ಸಾಂ ಸನ್ಮಿಲಿತ ಮಹಾಸಂಘ ಹಾಗೂ ಇತರರು ಸೇರಿದಂತೆ 17 ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಿ, ತೀರ್ಪು ನೀಡಿದೆ.