ಅಮರಾವತಿ: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಸಲು ಪ್ರಾಣಿಗಳ ಕೊಬ್ಬಿನ ಅಂಶ ಹೊಂದಿದ್ದ ತುಪ್ಪ ಬಳಸಲಾಗಿದೆ ಎಂಬ ಆರೋಪದ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ಐವರು ಸದಸ್ಯರ 'ಸ್ವತಂತ್ರ' ವಿಶೇಷ ತನಿಖಾ ತಂಡವನ್ನುರಚಿಸಿದ್ದನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ವಾಗತಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿಬಿಐ ಕಡೆಯಿಂದ 'ಸ್ವತಂತ್ರ' ವಿಶೇಷ ತನಿಖಾ ತಂಡದ ರಚನೆಯನ್ನು ನಾನು ಸ್ವಾಗತಿಸುತ್ತೇನೆ. ಆಂಧ್ರ ಪ್ರದೇಶ ಪೊಲೀಸರು ಹಾಗೂ FSSAI ಅಧಿಕಾರಿಗಳಿರುವ ಎಸ್‌ಐಟಿ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿ ಸತ್ಯವನ್ನು ಬಹಿರಂಗಗೊಳಿಸಲಿದೆ ಎಂದು ನಂಬಿದ್ದೇನೆ. ಜೈ ವೆಂಕಟೇಶ್ವರ ಎಂದು ಅವರು ಬರೆದುಕೊಂಡಿದ್ದಾರೆ.
ಏತನ್ಮಧ್ಯೆ ಸುಪ್ರೀಂ ಕೋರ್ಟ್ ಚಂದ್ರಬಾಬು ನಾಯ್ಡು ಅವರಿಗೆ ಛೀಮಾರಿ ಹಾಕಿದೆ ಎಂದು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಪ್ರತಿಪಾದಿಸಿದ್ದಾರೆ.
ಎನ್.ಚಂದ್ರಬಾಬು ನಾಯ್ಡು ಅವರಿಗೆ ದೇವರ ಮೇಲೆ ಭಕ್ತಿ ಇದ್ದರೆ ಜನರ ಕ್ಷಮೆ ಕೇಳಬೇಕು. ತಾನು ಮಾಡಿದ ತಪ್ಪನ್ನು ಮನ್ನಿಸುವಂತೆ ವೆಂಕಟೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಲಿ ಎಂದು ಹೇಳಿದ್ದಾರೆ.
ಎಸ್‌ಐಟಿಯಲ್ಲಿ ಯಾರ್‍ಯಾರು?
ವಿಶೇಷ ತನಿಖಾ ತಂಡದಲ್ಲಿ ಸಿಬಿಐ ಮತ್ತು ಆಂಧ್ರ ಪ್ರದೇಶ ಪೊಲೀಸ್‌ನ ತಲಾ ಇಬ್ಬರು ಅಧಿಕಾರಿಗಳು ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಒಬ್ಬ ಅಧಿಕಾರಿ ಇರುವರು ಎಂದು ಪೀಠವು ಹೇಳಿತು. ಸಿಬಿಐನ ಇಬ್ಬರು ಅಧಿಕಾರಿಗಳನ್ನು ಅದರ ನಿರ್ದೇಶಕರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡಲಿದೆ. ಎಫ್‌ಎಸ್‌ಎಸ್‌ಎಐ ಮುಖ್ಯಸ್ಥರು ಅದರ ಹಿರಿಯ ಅಧಿಕಾರಿಯೊಬ್ಬರನ್ನು ಎಸ್‌ಐಟಿಗೆ ನಾಮನಿರ್ದೇಶನ ಮಾಡುವರು ಪೀಠ ತಿಳಿಸಿತು.