ವಾಷಿಂಗ್ಟನ್: ಅಮೆರಿಕದಲ್ಲಿ ಇರುವ ಭಾರತ ಮೂಲದವರು ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಮೆರಿಕದಲ್ಲಿರುವ ಭಾರತ ಮೂಲದವರ ನಾಯಕ ಸ್ವದೇಶ್ ಚಟರ್ಜಿ ಹೇಳಿದ್ದಾರೆ.
ಕಮಲಾ ಅವರು ಸೆನೆಟರ್ ಆಗಿದ್ದಾಗ ಹಾಗೂ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದಾಗ ಅಮೆರಿಕದಲ್ಲಿನ ಭಾರತೀಯ ಸಮುದಾಯದವರ ನಡುವೆ ನೆಲೆ ಸೃಷ್ಟಿಸಿಕೊಳ್ಳುವ ಕೆಲಸ ಮಾಡಿಲ್ಲ ಎಂದು ಚಟರ್ಜಿ ಅಭಿಪ್ರಾಯಪಟ್ಟಿದ್ದಾರೆ.
2001ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದ ಚಟರ್ಜಿ ಅವರು ಕಮಲಾ ಅವರ ಪರವಾಗಿ ಕೆಲವು ರಾಜ್ಯಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಕಮಲಾ ಅವರು ಸೆನೆಟರ್ ಆಗಿ ಭಾರತೀಯ ಸಮುದಾಯದ ಯಾವುದೇ ಸಭೆಗಳಲ್ಲಿ ಭಾಗಿಯಾಗುತ್ತಿರಲಿಲ್ಲ, ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಭಾರತೀಯ ಅಮೆರಿಕನ್ನರ ನೆಲೆ ಸೃಷ್ಟಿಸಿಕೊಳ್ಳಲಿಲ್ಲ ಎಂದಿದ್ದಾರೆ.