ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಎರಡು ವಾರಗಳು ಬಾಕಿ ಇರುವಾಗಲೇ ಸುಮಾರು 2.1 ಕೋಟಿ ಅಮೆರಿಕನ್ನರು ಮತ ಚಲಾಯಿಸಿದ್ದಾರೆ. ಫ್ಲಾರಿಡಾ ವಿಶ್ವವಿದ್ಯಾಲಯದ 'ಎಲೆಕ್ಷನ್ ಲ್ಯಾಬ್' ನೀಡಿರುವ ಅಂಕಿಅಂಶಗಳ ಪ್ರಕಾರ, 78 ಲಕ್ಷ ಮಂದಿ ಪ್ರಾರಂಭಿಕ ವ್ಯಕ್ತಿಗತ ಮತದಾನದ (ಅರ್ಲಿ ಇನ್-ಪರ್ಸನ್ ವೋಟಿಂಗ್) ಮೂಲಕ ಮತ್ತು ಉಳಿದ 1.3 ಕೋಟಿ ಮಂದಿ ಅಂಚೆ ಮುಖಾಂತರ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಅಮೆರಿಕದಲ್ಲಿ ಚುನಾವಣೆ ಆರಂಭಕ್ಕೂ 36 ಗಂಟೆಗಳ ಮುನ್ನ ಪ್ರಚಾರವು ಅಂತ್ಯಗೊಳ್ಳುತ್ತದೆ.
ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಿದ್ದಾರೆ.
ಅರಿಜೋನಾ, ಮಿಚಿಗನ್, ನೇವಾಡ, ಉತ್ತರ ಕೆರೊಲಿನಾ, ಜಾರ್ಜಿಯಾ ಹಾಗೂ ಪೆನ್ಸಿಲ್ವೇನಿಯಾ ರಾಜ್ಯಗಳು ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಲಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಮಲಾ ಹ್ಯಾರಿಸ್ ಟ್ರಂಪ್ ಗೆದ್ದರೇನು ಗತಿ- ಜಾಗತಿಕ ನಾಯಕರ ಚಿಂತೆ' ಕಾಂಕರ್ಡ್ (ಎಪಿ): ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದರೆ ಏನು ಗತಿ ಎಂದು ಜಾಗತಿಕ ನಾಯಕರು ಭಯಭೀತರಾಗಿದ್ದಾರೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ನ್ಯೂಹ್ಯಾಂಸ್ಪಿಯರ್‌ನಲ್ಲಿ ಮಾತನಾಡಿದ ಅವರು 'ಪ್ರತಿ ಬಾರಿ ಅಂತರರಾಷ್ಟ್ರೀಯ ಸಭೆಗಳಲ್ಲಿ ಪಾಲ್ಗೊಂಡಾಗಲೂ ಒಬ್ಬರ ಬಳಿಕ ಒಬ್ಬರು ಸ್ವಲ್ಪ ಪಕ್ಕಕ್ಕೆ ಕರೆದು 'ಜೋ... 'ಅವರು' ಗೆಲ್ಲಬಾರದು' ಎಂದು ಹೇಳುತ್ತಾರೆ' ಎಂದು ಹೇಳಿದರು. ನಂತರ ಬೆಂಬಲಿರನ್ನು ಉದ್ದೇಶಿಸಿ 'ಟ್ರಂಪ್ ಅವರನ್ನು ಪರಾಭವಗೊಳಿಸಿ ಹೊರದಬ್ಬಬೇಕು' ಕರೆ ನೀಡಿದರು.
Cut-off box - ಲಿಂಗ ತಾರತಮ್ಯದ ಬಗ್ಗೆ ಚಿಂತಿಸಿಲ್ಲ: ಕಮಲಾ ವಾಷಿಂಗ್ಟನ್ (ಎಪಿ): 'ಡೊನಾಲ್ಡ್ ಟ್ರಂಪ್ ಅವರು ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಮುನ್ನವೇ ವಿಜಯ ಘೋಷಣೆ ಮಾಡಲು ಪ್ರಯತ್ನಿಸಿದಲ್ಲಿ ಅದನ್ನು ಪ್ರಶ್ನಿಸಲು ನಮ್ಮ ತಂಡ ಸಿದ್ಧವಿದೆ' ಎಂದು ಕಮಲಾ ಹ್ಯಾರಿಸ್ ಮಂಗಳವಾರ ತಿಳಿಸಿದರು. ಎನ್‌ಬಿಸಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು 'ಚುನಾವಣೆಯಲ್ಲಿ ಲಿಂಗ ತಾರತಮ್ಯದ ಪ್ರಭಾವದ ಬಗ್ಗೆ ಹೆಚ್ಚು ಯೋಚಿಸಿಲ್ಲ' ಎಂದು ಹೇಳಿದರು. 'ದೇಶದ ಜನರು ಲಿಂಗ ಅಥವಾ ಜನಾಂಗದ ಆಧಾರದಲ್ಲಿ ತಮ್ಮ ನಾಯಕರನ್ನು ಆಯ್ಕೆ ಮಾಡುತ್ತಾರೆ ಎಂದು ನನಗೆ ಅನಿಸುತ್ತಿಲ್ಲ' ಎಂದು ಅಭಿಪ್ರಾಯಪಟ್ಟರು.
ಕಮಲಾ ಪರ ರ್‍ಯಾಪರ್ ಎಮಿನೆಮ್ ಪ್ರಚಾರ ಡೆಟ್ರಾಯಿಟ್ (ಎಪಿ): ರ್‍ಯಾಪರ್ ಎಮಿನೆಮ್ ಅವರು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಮಂಗಳವಾರ ಮತಯಾಚಿಸಿದರು. ಡೊನಾಲ್ಡ್ ಟ್ರಂಪ್ ಅವರ ದೀರ್ಘಕಾಲದ ಟೀಕಾಕಾರೂ ಆಗಿರುವ ಎಮಿನೆಮ್ 'ನಮ್ಮ ಹಕ್ಕನ್ನು ಚಲಾಯಿಸುವುದು ಮುಖ್ಯ. ಎಲ್ಲರೂ ಮತದಾನ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ' ಎಂದು ಹೇಳಿದರು.