ನವದೆಹಲಿ: ವಕ್ಫ್ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ BJP ಮತ್ತು TMC ನಾಯಕರ ನಡುವೆ ಜಟಾಪಟಿ ನಡೆದಿದ್ದು ಈ ವೇಳೆ ಟಿಎಂಸಿ ನಾಯಕ ಗಾಜಿನ ಬಾಟಲಿ ಹೊಡೆದು ಕೈಗೆ ಗಾಯ ಮಾಡಿಕೊಂಡ ಘಟನೆ ವರದಿಯಾಗಿದೆ.
ಕೇಂದ್ರ ಸರ್ಕಾರದ ವಕ್ಫ್ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ, ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ಕೋಪದಿಂದ ಗಾಜಿನ ನೀರಿನ ಬಾಟಲಿ ಹೊಡೆದಿದ್ದು ಈ ವೇಳೆ ಅವರ ಕೈ ಬೆರಳುಗಳಿಗೆ ಗಾಯವಾಗಿದೆ. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬ್ಯಾನರ್ಜಿ ಕೋಪದಿಂದ ನೀರಿನ ಗಾಜಿನ ಬಾಟಲಿಯನ್ನು ಎತ್ತಿಕೊಂಡು ಮೇಜಿನ ಮೇಲೆ ಬಲವಾಗಿ ಹೊಡೆದರು. ಈ ವೇಳೆ ಅವರ ಹೆಬ್ಬೆರಳು ಮತ್ತು ತೋರು ಬೆರಳಿಗೆ ಗಾಯವಾಯಿತು. ನಂತರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಅವರನ್ನು ಸಭೆಯಿಂದ ಹೊರಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದರು ಎನ್ನಲಾಗಿದೆ.