ತಿರುವನಂತಪುರಂ: ವಯನಾಡು ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13ರಂದು ಉಪಚುನಾವಣೆ(Wayanad By Election) ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಭಾರತದ ಚುನಾವಣಾ ಆಯೋಗವು (ಇಸಿಐ) ಘೋಷಿಸಿರುವ ವಿಚಾರ ಗೊತ್ತೆ ಇದೆ.
ವಾಸ್ತವವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದರು. ಒಂದು ಕೇರಳದ ವಯನಾಡು ಮತ್ತು ಇನ್ನೊಂದು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರ. ಸ್ಪರ್ಧಿಸಿದ ಎರಡೂ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಗೆದ್ದಿದ್ದರು ಆದರೆ ಅವರು ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಲು ನಿರ್ಧರಿಸಿದರು.
ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ಈಗಾಗಲೇ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಪ್ರಿಯಾಂಕಾ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನ ಅಭ್ಯರ್ಥಿಯನ್ನಾಗಿ ನವ್ಯಾ ಹರಿದಾಸ್ ಅವರನ್ನು ಕಣಕ್ಕಿಳಿಸಿದೆ.
ನವ್ಯಾ ಹರಿದಾಸ್ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. ಅವರು ಕೋಝಿಕ್ಕೋಡ್ ಕಾರ್ಪೊರೇಷನ್‌ನಲ್ಲಿ ಸತತ ಎರಡನೇ ಅವಧಿಗೆ ಬಿಜೆಪಿ ಕೌನ್ಸಿಲರ್ ಆಗಿದ್ದಾರೆ. ಸದ್ಯ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಟು ರಾಜ್ಯಗಳ ವಿಧಾನಸಭಾ ಚುನಾವಣೆಗೆ 24 ಅಭ್ಯರ್ಥಿಗಳನ್ನು ಹೆಸರಿಸಿದೆ.ಕೇಂದ್ರ ರಾಜ್ಯವಲ್ಲದೆ, ಅಸ್ಸಾಂ, ಬಿಹಾರ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ.