ತಿರುವನಂತಪುರ: ವಯನಾಡಿನ ರೈತರು ಮತ್ತು ಬುಡಕಟ್ಟು ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಭರವಸೆ ನೀಡಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಅವರು ಶನಿವಾರ ಕ್ಷೇತ್ರದ ಜನರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
'ಆದ್ದರಿಂದ ಇಲ್ಲಿನ ಜನರನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವುದು ಬಲುದೊಡ್ಡ ಗೌರವ ಎಂದು ಭಾವಿಸಿದ್ದೇನೆ' ಎಂದು ವಯನಾಡಿನಲ್ಲಿ ಸೋಮವಾರ ತಮ್ಮ ಪ್ರಚಾರ ಅಭಿಯಾನವನ್ನು ಪುನರಾರಂಭಿಸಲಿರುವ ಅವರು ಹೇಳಿದ್ದಾರೆ.
ತನ್ನ ಸಹೋದರ ಹಾಗೂ ವಯನಾಡ್ ಕ್ಷೇತ್ರದ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಕ್ಷೇತ್ರದ ಜನರ ಜೊತೆಗೆ ಹೊಂದಿರುವ ಬಾಂಧವ್ಯವನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಅಭ್ಯರ್ಥಿವಯನಾಡ್‌ನ ಪ್ರಾಕೃತಿಕ ಸೌಂದರ್ಯ ಮತ್ತು ಸಂಪನ್ಮೂಲಗಳನ್ನು ರಕ್ಷಿಸುವ ಜತೆಯಲ್ಲೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕಿದೆ.'ವಯನಾಡ್‌ನಿಂದ ಸ್ಪರ್ಧಿಸುವಂತೆ ನನ್ನನ್ನು ಕೇಳಿದಾಗ ರಾಹುಲ್ ಅವರಿಗೆ ಹೆಮ್ಮೆ ಹಾಗೂ ದುಃಖ ಉಂಟಾಗಿತ್ತು. ನೀವು ಎತ್ತಿಹಿಡಿದಿರುವ ಮೌಲ್ಯಗಳು, ನಿಮ್ಮ ಸಂಸ್ಕೃತಿ ಮತ್ತು ನಿಮ್ಮೊಂದಿಗಿನ ಆಳವಾದ ಬಾಂಧವ್ಯದ ಬಗ್ಗೆ ಅವರಲ್ಲಿ ಹೆಮ್ಮೆಯಿದೆ. ಅದೇ ವೇಳೆ, ನಿಮ್ಮನ್ನು ಬಿಟ್ಟುಹೋಗಬೇಕಾಗಿ ಬಂದ ದುಃಖವೂ ಅವರಲ್ಲಿದೆ. ವಯನಾಡ್ ಕ್ಷೇತ್ರದ ಜನರೊಂದಿಗಿನ ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಬೇಕಾದ ಎಲ್ಲ ಕೆಲಸವನ್ನೂ ನಾನು ಮಾಡುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೇನೆ' ಎಂದಿದ್ದಾರೆ.
'ವಯನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಒದಗಿಸುವ ಮಾರ್ಗಗಳ ಬಗ್ಗೆ ರಾಹುಲ್ ಗಾಂಧಿ ಅವರು ನನ್ನೊಂದಿಗೆ ಚರ್ಚಿಸಿದ್ದಾರೆ. ರೈತರು ಹಾಗೂ ಬುಡಕಟ್ಟು ಜನರ ಬಗ್ಗೆ ಅವರು ವಿಶೇಷ ಕಾಳಜಿ ಹೊಂದಿದ್ದರು. ಅವರ ಪರವಾಗಿ ನಾನೂ ಕೆಲಸ ಮಾಡುವೆ' ಎಂದು ಭರವಸೆ ನೀಡಿದ್ದಾರೆ.
'ಈ ಪಯಣದಲ್ಲಿ ನೀವು ಮಾರ್ಗದರ್ಶಕರಾಗಿರುತ್ತೀರಿ ಎಂದು ನಂಬಿದ್ದೇನೆ. ನಾನು ಜನ ಪ್ರತಿನಿಧಿಯಾಗಲು ಹೊರಟಿರುವುದು ಇದೇ ಮೊದಲು ಹೌದು. ಆದರೆ ಜನ ಪರ ಹೋರಾಟ ನನಗೆ ಇದೇ ಮೊದಲಲ್ಲ' ಎಂದು ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಇಳಿದಿರುವ ಅವರು ಹೇಳಿದ್ದಾರೆ.