ನವದೆಹಲಿ: ತಮ್ಮ ಕೆಲಸವನ್ನು ನಿಧಾನಗತಿಯಲ್ಲಿ ಮಾಡುತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣ ನೀಡಿ ಮಹಿಳೆಯೊಬ್ಬರನ್ನು ಸರಪಂಚ ಹುದ್ದೆಯಿಂದ ತೆಗೆದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿ ಎಂದು ಛತ್ತೀಸಗಢದ ಅಧಿಕಾರಿಗಳಿಗೆ ಚಾಟಿ ಬೀಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಉಜ್ಜಲ್ ಭುಯಾನ್ ಅವರಿದ್ದ ಪೀಠವು, 'ಇದು ಪ್ರಭುತ್ವವಾದಿ ಮನಸ್ಥಿತಿಯಾಗಿದೆ. ಮಹಿಳೆಯನ್ನು ಪುನಃ ಸರಪಂಚ್ ಹುದ್ದೆಗೆ ನೇಮಿಸಬೇಕು. ಅವರಿಗೆ ಅನಗತ್ಯ ಕಿರುಕುಳ ಹಾಗೂ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದಕ್ಕೆ ಪರಿಹಾರ ರೂಪವಾಗಿ ₹1 ಲಕ್ಷ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ಜಸ್ಪುರ್ ಜಿಲ್ಲೆಯ ಸಜ್‌ಬಹಾರ್ ಪಂಚಾಯತ್‌ಗೆ ಸರಪಂಚ್ ಆಗಿ 27 ವರ್ಷ ಸೋನಮ್ ಲಾಕ್ರಾ ಎಂಬುವವರು ಆಯ್ಕೆಯಾಗಿದ್ದರು. ಆದರೆ 2020ರ ಜನವರಿಯಲ್ಲಿ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಯಿತು. ಇದನ್ನು ಪ್ರಶ್ನಿಸಿ ಸೋನಮ್ ಅವರು ಧಾವೆ ಹೂಡಿದ್ದರು. ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, 'ಚುನಾಯಿತ ಹುದ್ದೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆದರೆ, ಅವರನ್ನು ಕಡೆಗಣಿಸುವ ಮನಸ್ಥಿತಿಯನ್ನು ಹೊಂದಬಾರದು' ಎಂದಿತು.
'ನೊಂದ ಮಹಿಳೆಗೆ ನಾಲ್ಕು ವಾರಗಳ ಒಳಗಾಗಿ ₹1 ಲಕ್ಷ ಪರಿಹಾರ ನೀಡಬೇಕು. ಜತೆಗೆ ಈ ಕಿರುಕುಳಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಂದ ದಂಡದ ಹಣವನ್ನು ವಸೂಲು ಮಾಡಬೇಕು' ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು.
'ಅಭಿವೃದ್ಧಿ ಕಾರ್ಯಗಳು ವಿಳಂಬವಾಗಿವೆ ಎಂದು ಮಹಿಳಾ ಸರಪಂಚ್ ಮೇಲೆ ಆರೋಪಿಸಲಾಗಿದೆ. ನಿರ್ಮಾಣ ಕಾರ್ಯಗಳಲ್ಲಿ ಎಂಜಿನಿಯರ್, ವಿಭಾಗೀಯ ಅಧಿಕಾರಿ, ತಾಂತ್ರಿಕ ಅಧಿಕಾರಿ ಮತ್ತು ಸಿಇಒ ಹಾಗೂ ಹವಾಮಾನದ ಪಾತ್ರವೂ ಇರುತ್ತದೆ. ಕಾಮಗಾರಿ ವಿಳಂಬಕ್ಕೆ ಒಬ್ಬರನ್ನು ಹೊಣೆಯಾಗಿಸುವುದು ಸರಿಯಾದ ಕ್ರಮವಲ್ಲ' ಎಂದು ಸುಪ್ರೀಂ ಕೋರ್ಟ್ ಹೇಳಿತು.
'ಒಂದೆಡೆ ದೇಶವು ಆರ್ಥಿಕವಾಗಿ ಶಕ್ತಿ ಕೇಂದ್ರವಾಗಲು ಹೊರಟಿದೆ. ಮತ್ತೊಂದೆಡೆ ಇಂಥ ಪ್ರಕರಣಗಳು ನಡೆಯುತ್ತಿರುವುದು ಸಮಾಜ ತಲೆ ತಗ್ಗಿಸುವಂತೆ ಮಾಡುತ್ತಿದೆ. ಚುನಾವಣೆ ಮೂಲಕ ನೀಡಲಾದ ಪ್ರಜಾಸತ್ತಾತ್ಮಕ ನ್ಯಾಯಸಮ್ಮತೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಇದೊಂದು ಸಾಮಾನ್ಯ ಸಂಗತಿ ಎಂಬಂತೆ ಪರಿಗಣಿಸಿರುವುದೂ ಕಳವಳಕಾರಿ ಸಂಗತಿ ಎಂದು ಸುಪ್ರೀಂ ಕೋರ್ಟ್ ಆಘಾತ ವ್ಯಕ್ತಪಡಿಸಿತು.