ಎರುಮೇಲಿ: ಕಣಜಗಳ ದಾಳಿಗೆ 108 ವರ್ಷದ ವೃದ್ಧೆ ಹಾಗೂ ಆಕೆಯ ಮಗಳು ನಿನ್ನೆ (ನ.06) ಮೃತಪಟ್ಟಿದ್ದಾರೆ. ಸಾವಿಗೀಡಾದ ಮಹಿಳೆಯರನ್ನು ಇಲ್ಲಿನ ಪಾಕನಂನ ಕುಂಜುಪೆನ್ನು ನಾರಾಯಣನ್ ಮತ್ತು ಅವರ ಪುತ್ರಿ ಕೆ. ಎನ್ ತಂಕಮ್ಮ (80) ಎಂದು ಗುರುತಿಸಲಾಗಿದೆ. ಕಡಜಗಳ ಕಡಿತಕ್ಕೆ ಒಳಗಾದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ (ನ.05) ಸಂಜೆ 4 ಗಂಟೆ ಸುಮಾರಿಗೆ ನಾಲ್ವರು ಕುಂಜುಪೆನ್ನು ಅವರ ಮನೆಯ ಅಂಗಳದಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಣಜಗಳ ಹಿಂಡು ಏಕಾಏಕಿ ದಾಳಿ ಮಾಡಿದ ಹಿನ್ನಲೆ, ಅಮ್ಮ-ಮಗಳು ಕಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಬ್ಬರ ದೇಹ ಪೂರ ಗಾಯಗೊಳಿಸಿದ ಕಡಜಗಳು, ವೃದ್ಧೆ ಮತ್ತು ಆಕೆಯ ಮಗಳ ಪ್ರಾಣವನ್ನು ಕಸಿದುಕೊಂಡಿದೆ.
ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿನ್ನೆ ಮುಂಜಾನೆ ಕುಂಜುಪೆಣ್ಣು ಮೃತಪಟ್ಟಿದ್ದು, ಮಧ್ಯಾಹ್ನದ ವೇಳೆಗೆ ತಂಕಮ್ಮ ಮೃತಪಟ್ಟಿದ್ದಾರೆ. ಕುಟುಂಬದ ಸಹಾಯಕರಾದ ಜಾಯ್ (75), ಮತ್ತು ನೆರೆಹೊರೆಯವರಾದ ಶಿವದರ್ಶನ್ (24) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಡಕ್ಕಯಂ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಮ್ಮ-ಮಗಳು ಸಾವನ್ನಪ್ಪಿದ್ದಾರೆ.