ಇಟಾನಗರ: ಅರುಣಾಚಲ ಪ್ರದೇಶದ ಆಲ್ ನೈಶಿ ವಿದ್ಯಾರ್ಥಿ ಒಕ್ಕೂಟದ (ಎಎನ್‌ಎಸ್‌ಯು) ಹೊಸ ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಟಾನಗರದ ಸಿದ್ಧಾರ್ಥ ಹಾಲ್‌ನಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ತಿಳಿಸಿದ್ದಾರೆ.
ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಹರಿತವಾದ ಆಯುಧಗಳಿಂದ ಹೊಡೆದಾಟ ನಡೆದಿತ್ತು. ಘರ್ಷಣೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವೇಳೆ ಎರಡೂ ಕಡೆಯಿಂದ ಗುಂಡಿನ ಚಕಮಕಿಯೂ ನಡೆದಿತ್ತು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದು, ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಲಾಗಿದೆ. ಹಿಂಸಾಚಾರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೂ ಗಾಯಗಳಾಗಿವೆ ಎಂದು ಸಿಂಗ್ ಹೇಳಿದ್ದಾರೆ.
ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಇಟಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
1982ರಲ್ಲಿ ರೂಪುಗೊಂಡ ನೈಶಿ ವಿದ್ಯಾರ್ಥಿ ಒಕ್ಕೂಟ ಈಶಾನ್ಯ ಭಾರತದ ಅತಿದೊಡ್ಡ ವಿದ್ಯಾರ್ಥಿಗಳ ಸಂಘಟನೆಗಳಲ್ಲಿ ಒಂದಾಗಿದೆ.
ನವೆಂಬರ್ 22ರಂದು ಎಎನ್‌ಎಸ್‌ಯು ಹೊಸ ಕಾರ್ಯಕಾರಿ ಮಂಡಳಿಗೆ ಚುನಾವಣೆ ನಡೆದಿತ್ತು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಲ್ಲಿ ಒಬ್ಬರಾದ ರೋಮೇಶ್ ಮಾಗಾ ಅವರನ್ನು ಚುನಾವಣಾ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗಿತ್ತು. ಇದೇ ವಿಚಾರವಾಗಿ ಅಂದೂ ಕೂಡ ಹಿಂಸಾಚಾರ ನಡೆದಿತ್ತು.