ಪೇಶಾವರ: ಪಾಕಿಸ್ತಾನದ ವಾಯವ್ಯದಲ್ಲಿ ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆ ಮುಂದುವರಿದಿದೆ. ಘಟನೆಯಲ್ಲಿ ಕನಿಷ್ಠ 10 ಜನ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಫ್ಗಾನಿಸ್ತಾನದ ಜತೆ ಗಡಿ ಹೊಂದಿರುವ ಖೈಬರ್ ಪಖ್ತುಂಖ್ವಾ ಪ್ರದೇಶದ ಕುರ‍್ರಂ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಹಿಂಸಾಚಾರ ನಡೆದಿದೆ.
ಹಿಂಸಾಚಾರ ಘಟನೆಯಲ್ಲಿ ಕಳೆದ ಒಂದು ವಾರದಲ್ಲಿ 100 ಮಂದಿ ಪ್ರಾಣ ಕಳೆದುಕೊಂಡಿದ್ದು, 180ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನ. 21ರಂದು ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಪರಾಚಿನಾರ್ ನಗರದಲ್ಲಿ ಹಲವು ವಾಹನಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, 47 ಮಂದಿ ಮೃತಪಟ್ಟಿದ್ದರು. ಬಳಿಕ ಕುರ್ರಂ ಜಿಲ್ಲೆಯಲ್ಲಿ ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು.
ಹಿಂಸಾಚಾರದಲ್ಲಿ ಕನಿಷ್ಠ 37 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಂತೀಯ ಸರ್ಕಾರದ ನಿಯೋಗ ಮತ್ತು ಎರಡೂ ಪಂಗಡಗಳ ಮುಖ್ಯಸ್ಥರು ಸಭೆ ನಡೆಸಿದ್ದು, ಏಳು ದಿನಗಳ ವರೆಗೆ ಘರ್ಷಣೆಗೆ ವಿರಾಮ ಘೋಷಿಸಲಾಗಿತ್ತು. ಆದಾಗ್ಯೂ ಅಲ್ಲಲ್ಲಿ ಘರ್ಷಣೆಗಳು ಮುಂದುವರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.