ನವದೆಹಲಿ :ದೇಶದಲ್ಲಿ 2024ರ ಅಕ್ಟೋಬರ್ನಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್ಗಢದಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ವರದಿ ಯಾಗಿದೆ. ಈ ಮೂಲಕ 1951ರ ಅಕ್ಟೋಬರ್ನಲ್ಲಿ ವರದಿಯಾಗಿದ್ದ ತಾಪಮಾನದ ದಾಖಲೆ ಮುರಿದಿದೆ.
ಪ್ರಸಕ್ತ ತಿಂಗಳ ಎರಡು ವಾರದವರೆಗೆ ದೇಶದ ಕೆಲ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಾರಿ ನೈಋತ್ಯ ಮಾನ್ಸೂನ್( ಮುಂಗಾರು) ತಡವಾಗಿ ವಾಪಸ್ ಆಗಿರುವುದೂ ಸೇರಿ ಇತರ ಕಾರಣಗಳಿಂದ ಕೆಲ ರಾಜ್ಯಗಳಲ್ಲಿ ಅಕ್ಟೋಬರ್ನಲ್ಲಿ ತಾಪಮಾನ ಜಾಸ್ತಿಯಾಗಿದೆ. ಅಲ್ಲದೆ, ದೇಶದ ಈಶಾನ್ಯ, ಮಧ್ಯ ರಾಜ್ಯಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ಉಂಟಾಗುವ ಸಾಧ್ಯತೆ ಇರುವುದರಿಂದ ಬೆಚ್ಚಗಿನ ವಾತಾವರಣ ಇರಲಿದೆ. ಬಳಿಕ ಕ್ರಮೇಣ ಇಳಿಕೆಯಾಗಲಿದೆ.
ಪ್ರಸಕ್ತ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್ನಲ್ಲಿ 'ಲಾ-ನಿನಾ' ಆರಂಭವಾದರೆ ಈ ಬಾರಿ ತೀವ್ರ ಚಳಿ ಕಾಣಿಸಿಕೊಳ್ಳಲಿದೆ. ಇತ್ತೀಚಿನ ಜಾಗತಿಕ ತಾಪಮಾನ ಮುನ್ಸೂಚನೆ ಹಿನ್ನೆಲೆಯಲ್ಲಿ ಡಿಸೆಂಬರ್ನಲ್ಲಿ 'ಲಾ ನಿನಾ' ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಚಳಿಗಾಲದ ಸ್ವರೂಪ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಂಶೋಧನೆಯಲ್ಲಿ ತೊಡಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ರಾಜ್ಯದಲ್ಲಿ ಮಳೆ ತುಸು ಕ್ಷೀಣ
ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 2 ದಿನ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಗುಡುಗು- ಮಿಂಚು ಸಹಿತ ಧಾರಾಕಾರವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಯಾದಗಿರಿ ಜಿಲ್ಲೆಗಳ ಹಲವೆಡೆ ಶನಿವಾರ ರಾತ್ರಿ ಹಾಗೂ ಭಾನುವಾರ ವರ್ಷಧಾರೆಯಾಗಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮುಂದಿನ 2 ದಿನ ಗುಡುಗು ಮಿಂಚು ಸಹಿತ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ನ.6ರಿಂದ ರಾಜ್ಯದೆಲ್ಲೆಡೆ ಮಳೆ ಕ್ಷೀಣವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.