ನವದೆಹಲಿ: ಜಾರ್ಖಂಡ್ ನಾಗರಿಕ ಸೇವಾ ಆಯೋಗದಲ್ಲಿ (JPSC) ನಡೆದಿದೆ ಎನ್ನಲಾದ ನೇಮಕಾತಿ ಹಗರಣದಲ್ಲಿ ಆಯೋಗದ ಅಂದಿನ ಅಧ್ಯಕ್ಷ ದಿಲೀಪ್ ಕುಮಾರ್ ಪ್ರಸಾದ್ ಅವರನ್ನು ಒಳಗೊಂಡಂತೆ 60 ಜನರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ.
2012ರಲ್ಲಿ ನಡೆದ ಎರಡು ನೇಮಕಾತಿ ಹಗರಣಗಳಲ್ಲಿ ಜಾರ್ಖಂಡ್ ಹೈಕೋರ್ಟ್ ಆದೇಶದಂತೆ ಪ್ರಕರಣ ದಾಖಲಿಸಿಕೊಂಡ ಸಿಬಿಐ ತನಿಖೆ ಆರಂಭಿಸಿತ್ತು.
ಅಪರಾಧ ಸಂಚು, ವಂಚನೆ ಒಳಗೊಡಂತೆ ಐಪಿಸಿಯ ಹಲವು ಸೆಕ್ಷನ್‌ಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
'ಹೆಚ್ಚುವರಿ ಜಿಲ್ಲಾಧಿಕಾರಿ, ಡಿಎಸ್‌ಪಿ, ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೆಲವರಿಗೆ ನೆರವಾಗಲು ಅಕ್ರಮ ಎಸಗಲಾಗಿದೆ. ಪರೀಕ್ಷೆಯಲ್ಲಿ ಲಭ್ಯವಾದ ಅಂಕಗಳನ್ನು ತಿರುಚಲಾಗಿದೆ. ತಮಗೆ ಬೇಕಾದ ಮೌಲ್ಯಮಾಪಕರನ್ನೇ ನಿಯೋಜಿಸಲಾಗಿದೆ' ಎಂದು ಆರೋಪಿಸಲಾಗಿತ್ತು.
ಈ ಪ್ರಕರಣದಲ್ಲಿ ಬಹಳಷ್ಟು ಅಭ್ಯರ್ಥಿಗಳು ಸಂಬಂಧಿಗಳಾಗಿದ್ದಾರೆ. ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು, ಹಿರಿಯ ಕಾನೂನು ಅಧಿಕಾರಿಗಳು, ಆಯೋಗದ ಅಧಿಕಾರಿಗಳ ಮಕ್ಕಳು ಹಾಗೂ ಹತ್ತಿರದವರಾಗಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.