ತಿರುವನಂತಪುರ: ಗೆಜೆಟೆಡ್ ಅಧಿಕಾರಿಗಳು ಮತ್ತು ಕಾಲೇಜು ಪ್ರಾಧ್ಯಾಪಕರು ಸೇರಿದಂತೆ ಸುಮಾರು 1,500 ಸರ್ಕಾರಿ ನೌಕರರು ಅಕ್ರಮವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ ವಂಚನೆ ಪ್ರಕರಣ ಕೇರಳದಲ್ಲಿ ಕಂಡುಬಂದಿದ್ದು, ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಶಿಸ್ತು ಕ್ರಮಗಳಿಗೆ ಆದೇಶಿಸಿದ್ದಾರೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
'ರಾಜ್ಯದಲ್ಲಿ 1,458 ಸರ್ಕಾರಿ ನೌಕರರು ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವುದು ಕಂಡುಬಂದಿದೆ' ಎಂದು ಮೂಲಗಳು ತಿಳಿಸಿವೆ.
ಸಚಿವರ ಸೂಚನೆಗಳನ್ನು ಆಧರಿಸಿ ನಡೆದ ಪರಿಶೀಲನೆ ವೇಳೆ ವಂಚನೆ ಪತ್ತೆಯಾಗಿದೆ. ಮೂಲಗಳ ಪ್ರಕಾರ, ಬಡವರು ಮತ್ತು ವೃದ್ಧರಿಗೆ ಮೀಸಲಾದ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕಾಲೇಜು ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಗೆಜೆಟೆಡ್ ಅಧಿಕಾರಿಗಳು ಪಡೆಯುತ್ತಿದ್ದಾರೆ. ಕಲ್ಯಾಣ ಪಿಂಚಣಿ ಪಡೆಯುವವರ ಪಟ್ಟಿಯಲ್ಲಿ ಪ್ರೌಢಶಾಲಾ ಶಿಕ್ಷಕರೂ ಇದ್ದಾರೆ.
ಅಕ್ರಮವಾಗಿ ಪಡೆದ ಪಿಂಚಣಿಯ ಹಣವನ್ನು ಬಡ್ಡಿಸಮೇತ ವಸೂಲಿ ಮಾಡುವಂತೆ ಹಣಕಾಸು ಇಲಾಖೆಗೆ ಸೂಚಿಸಲಾಗಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಚಿವ ಬಾಲಗೋಪಾಲ್ ಸೂಚಿಸಿದ್ದಾರೆ.
ಕೇರಳ ಸರ್ಕಾರವು ಸುಮಾರು 62 ಲಕ್ಷ ಜನರಿಗೆ ತಿಂಗಳಿಗೆ ₹1,600 ಪಿಂಚಣಿ ನೀಡುತ್ತದೆ.
ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಮಂದಿ ಅಕ್ರಮವಾಗಿ ಜನ ಕಲ್ಯಾಣ ಪಿಂಚಣಿ ಪಡೆಯುತ್ತಿದ್ದು, 373 ಫಲಾನುಭವಿಗಳು ಇದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 224 ಮಂದಿ ಇದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯ 124, ಆಯುರ್ವೇದ ಇಲಾಖೆ (ಭಾರತೀಯ ಔಷಧ ಪದ್ಧತಿ) 114, ಪಶುಸಂಗೋಪನಾ ಇಲಾಖೆಯ 74 ಮತ್ತು ಲೋಕೋಪಯೋಗಿ ಇಲಾಖೆಯ 47, ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 46, ಹೋಮಿಯೋಪತಿ ಇಲಾಖೆಯಲ್ಲಿ 41. ಕೃಷಿ ಮತ್ತು ಕಂದಾಯ ಇಲಾಖೆಗಳು ತಲಾ 35, ನ್ಯಾಯಾಂಗ ಮತ್ತು ಸಾಮಾಜಿಕ ನ್ಯಾಯ ಇಲಾಖೆಗಳಲ್ಲಿ 34. ವಿಮಾ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ 31, ಕಾಲೇಜು ಶಿಕ್ಷಣ ಇಲಾಖೆಯಲ್ಲಿ 27 ಮಂದಿ ಅಕ್ರಮವಾಗಿ ಪಿಂಚಣೆ ಪಡೆಯುತ್ತಿದ್ದಾರೆ.