ಹ್ಯೂಸ್ಟನ್: ಎಲೆಕ್ಟ್ರಾನಿಕ್ ಆಕ್ಯುಪಂಚರ್ ಸಾಧನ ಅಳವಡಿಸಿರುವುದಾಗಿ ಸುಳ್ಳು ಹೇಳಿದ ಭಾರತೀಯ ಮೂಲಕ 53 ವರ್ಷದ ವೈದ್ಯರೊಬ್ಬರಿಗೆ ಅಮೆರಿಕದಲ್ಲಿ ₹16.89 ಕೋಟಿ ದಂಡ ವಿಧಿಸಲಾಗಿದೆ.
ಡಾ. ರಾಜೇಶ್ ಬಿಂದಾಲ್ ಅವರು ಹ್ಯೂಸ್ಟನ್ ನಗರದಲ್ಲಿ ನರರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವ್ಯಕ್ತಿಯೊಬ್ಬರಿಗೆ ಎಲೆಕ್ಟ್ರಾನಿಕ್ ಆಕ್ಯುಪಂಚರ್ ಸಾಧನ ಅಳವಡಿಸಿರುವುದಾಗಿ ಹೇಳಿದ್ದಾರೆ. ಆದರೆ ಇದನ್ನು ಅಳವಡಿಸಲು ಶಸ್ತ್ರಚಿಕಿತ್ಸೆ ಅಗತ್ಯ. ಆದರೆ ಅಂಥ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ಅವರು ನಡೆಸಿರಲಿಲ್ಲ. ಬದಲಿಗೆ ಕಿವಿಯ ಹಿಂದೆ ಈ ಸಾಧನವನ್ನು ಅಂಟಿಸಲಾಗಿತ್ತು ಎಂದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೇ ಪ್ರಕರಣದಲ್ಲಿ ಸಾಧನ ಅಳವಡಿಸಿದ್ದು ಡಾ. ಬಿಂದಾಲ್ ಅವರಲ್ಲ, ಬದಲಿಗೆ ಸಾಧನವನ್ನು ಮಾರಾಟ ಮಾಡುವ ಪ್ರತಿನಿಧಿ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
'ಡಾ. ಬಿಂದಾಲ್ ಅವರಂಥ ನರರೋಗ ಶಸ್ತ್ರಚಿಕಿತ್ಸಕರಿಗೆ ನೈಜ ಶಸ್ತ್ರಚಿಕಿತ್ಸೆ ಹಾಗೂ ಕಿವಿಯ ಹಿಂದೆ ಸಾಧನ ಅಂಟಿಸುವುದರ ನಡುವಿನ ವ್ಯತ್ಯಾಸ ಗೊತ್ತಿರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವೈದ್ಯರ ಸಾಲಿನಲ್ಲಿ ನಿಲ್ಲುವ ಇವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ರೋಗಿಯ ಆರೈಕೆಯನ್ನು ಕಡೆಗಣಿಸಿದ್ದಾರೆ' ಎಂದು ಅಮೆರಿಕದ ಅಟಾರ್ನಿ ಹಮ್ದಾನಿ ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.
'ಇಂಥ ವಂಚನೆ ಪ್ರಕರಣಗಳು ತೆರಿಗೆದಾತರ ಹಣ ವ್ಯಯ ಮಾತ್ರವಲ್ಲ, ಬದಲಿಗೆ ಆರೋಗ್ಯ ಕ್ಷೇತ್ರದ ಮೇಲಿನ ನಂಬಿಕೆ ಮೇಲೂ ಪರಿಣಾಮ ಬೀರಲಿದೆ' ಎಂದು ದೋಷಾರೋಪ ಪಟ್ಟಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.