ಸಿಡ್ನಿ: 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ನೂತನ ಮಸೂದೆಯನ್ನು ಆಸ್ಟ್ರೇಲಿಯಾ ಸಂಸತ್ತು ಗುರುವಾರ ಅಂಗೀಕರಿಸಿದೆ. ಇದು ವಿಶ್ವದ ಮೊದಲ ಕಾನೂನು ಆಗಲಿದೆ.ಇದರೊಂದಿಗೆ, ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳಾದ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಒಡೆತನದ ಮೆಟಾದಿಂದ ಟಿಕ್‌ಟಾಕ್ ವರೆಗೆ ಅಪ್ರಾಪ್ತರು ತಮ್ಮ ಆಯಪ್‌ಗಳಿಗೆ ಲಾಗಿನ್ ಆಗದಂತೆ ನಿರ್ಬಂಧಿಸುವ ಒತ್ತಡ ಸೃಷ್ಟಿಯಾಗಿದೆ.
ನಿಯಮ ಮೀರಿದರೆ, ಅಂದಾಜು ₹ 270 ಕೋಟಿಗೂ ಹೆಚ್ಚು ದಂಡ ವಿಧಿಸಲು ಕಾನೂನು ಅನುಮತಿಸುತ್ತದೆ.
ಒಂದು ವೇಳೆ 16 ವರ್ಷದ ಒಳಗಿನ ಮಕ್ಕಳು ಜಾಲತಾಣಗಳಲ್ಲಿ ಖಾತೆ ತೆರೆದರೆ ಸಂಬಂಧಿಸಿದ ವೇದಿಕೆಗಳೇ ಹೊಣೆಯಾಗುತ್ತವೆ ಎಂಬ ಅಂಶ ಕಾನೂನಿನಲ್ಲಿದೆ.
ಈ ಕಾನೂನು ಪ್ರಾಯೋಗಿಕವಾಗಿ ಜನವರಿ 1ರಿಂದ ಜಾರಿಗೆ ಬರಲಿದೆ. ಮಕ್ಕಳು ಖಾತೆ ಹೊಂದುವುದನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು ಜಾಲತಾಣಗಳಿಗೆ 1 ವರ್ಷ ಸಮಯಾವಕಾಶವನ್ನು ನೀಡಲಾಗಿದೆ.
ಸಾಮಾಜಿಕ ಮಾಧ್ಯಮಗಳು ಮಕ್ಕಳ ಭವಿಷ್ಯಕ್ಕೆ ಹಾನಿಮಾಡಲಿದೆ. ಅದನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದೇವೆ ಎಂಬುದಾಗಿ ಪ್ರಧಾನಿ ಆಯಂಟೊನಿ ಅಲ್ಬನೀಸ್ ಇತ್ತೀಚೆಗೆ ಹೇಳಿದ್ದರು.