ಕಾಸರಗೋಡು: ರೈಲ್ವೇ ಹಳಿ ಮೇಲೆ ಕಲ್ಲಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನ ಹಾಗೂ ವಂದೇಭಾರತ ರೈಲಿಗೆ ಕಲ್ಲು ತೂರಾಟ ನಡೆಸಿದ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಹಳಿ ಮೇಲೆ ಕಲ್ಲಿರಿಸಿದ ಘಟನೆಯಲ್ಲಿ ಪತ್ತನಂತಿಟ್ಟದ ವಯಾಲ ನಿವಾಸಿ 21 ವರ್ಷದ ಅಖಿಲ್ ಜಾನ್ ಮ್ಯಾಥ್ಯೂ ಮತ್ತು ವಂದೇಭಾರತ್ ಗೆ ಕಲ್ಲು ತೂರಾಟ ನಡೆಸಿದ ಘಟನೆಯಲ್ಲಿ 17 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಅಖಿಲ್ ಜಾನ್ ಪತ್ತನಂತಿಟ್ಟದಿಂದ ಕಾಸರಗೋಡಿಗೆ ಕೆಲಸ ಹುಡುಕಿಕೊಂಡು ಬಂದಿದ್ದ ಎಂದು ಆರ್ ಪಿಎಫ್ ಇನ್ಸ್ ಪೆಕ್ಟರ್ ಎಂ. ಅಲಿ ಅಕ್ಬರ್ ಹೇಳಿದರು. ಇಂದು ಬೆಳಗ್ಗೆ ಕಳನಾಡು ರೈಲು ಹಳಿಗಳ ಮೇಲೆ ಸಣ್ಣ ಕಲ್ಲುಗಳನ್ನು ಹಾಕಲಾಗಿತ್ತು. ಅಮೃತಸರ ಕೊಚುವೇಲಿ ಎಕ್ಸ್‍ಪ್ರೆಸ್ ಹಾದು ಹೋಗುತ್ತಿದ್ದಂತೆ ಈ ಕಲ್ಲುಗಳು ಪುಡಿಯಾದ ಸ್ಥಿತಿಯಲ್ಲಿತ್ತು. ಎರಡೂ ಹಳಿಗಳ ಮೇಲೆ ಕಲ್ಲುಗಳನ್ನು ಹಾಕಲಾಗಿತ್ತು.
ನವೆಂಬರ್ 8 ರಂದು ಬೇಕಲ್ ಪೂಚಕ್ಕಾಡ್ ನಲ್ಲಿ ವಂದೇಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ರೈಲಿನ ಕಿಟಕಿ ಒಡೆದಿದೆ. ರೈಲಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಿಂದ ಆರೋಪಿಯನ್ನು ಗುರುತಿಸಲಾಗಿದೆ. ಆರ್‍ಪಿಎಫ್ ಮತ್ತು ರೈಲ್ವೇ ಪೋಲೀಸರ ಜಂಟಿ ತನಿಖೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಕಾಸರಗೋಡು ಒಂದರಲ್ಲೇ ಐದು ಕಲ್ಲು ತೂರಾಟ ಹಾಗೂ ರೈಲು ದಾಳಿ ಪ್ರಕರಣಗಳು ದಾಖಲಾಗಿವೆ. ಆರ್‍ಪಿಎಫ್ ಮತ್ತು ಪೋಲೀಸರು ಪಥಸಂಚಲನವನ್ನು ತೀವ್ರಗೊಳಿಸಿದ್ದಾರೆ.