ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ನವೆಂಬರ್ 18 ರಿಂದ 21 ರವರೆಗೆ ಮಂಗಲ್ಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿಯ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಪೋರಂನಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪಜಿಲ್ಲೆಯ 95 ಶಾಲೆಗಳ ಸುಮಾರು ಎಂಟು ಸಾವಿರ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಂಗಲ್ಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೊರತಾಗಿ ಎಜೆಐ ಎಯುಪಿ ಶಾಲೆ, ಎಸ್‍ಎಸ್‍ಎಯುಪಿಎಸ್ ಐಲ, ಐಲ ದೇವಸ್ಥಾನ ಮತ್ತು ಲಯನ್ಸ್ ಕ್ಲಬ್ ಆಡಿಟೋರಿಯಂ ಕಲೋತ್ಸವಕ್ಕೆ ವೇದಿಕೆಯಾಗಲಿದೆ.
19, 20 ಮತ್ತು 21 ರಂದು 18 ವೇದಿಕೆಯೇತರ ಸ್ಪರ್ಧೆಗಳು ಮತ್ತು ವೇದಿಕೆಯ ಸ್ಪರ್ಧೆಗಳು ನಡೆಯಲಿವೆ. 19 ರಂದು ಬೆಳಿಗ್ಗೆ 10 ಕ್ಕೆ ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬೀನಾ ನೌಫಲ್ ಅಧ್ಯಕ್ಷತೆಯಲ್ಲಿ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ರಹಮಾನ್ ಗೋಲ್ಡನ್, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಹನೀಫ್ ಪಿ.ಕೆ., ಅಬ್ದುಲ್ ಲತೀಫ್ ಉಪ್ಪಳ ಗೇಟ್, ಕಾಸರಗೋಡು ಡಿವೈಎಸ್ಪಿ ಸಿ.ಕೆ.ಸುನೀಲ್ ಕುಮಾರ್, ಕಣ್ಣೂರು ಆರ್.ಡಿ.ಡಿ.ರಾಜೇಶ್ ಕುಮಾರ್, ಡಿಡಿಇ ಮಧುಸೂದನನ್ ಟಿ.ವಿ., ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಸೋಮಣ್ಣ ಬೇವಿನಮರದ ಪ್ರಕಾಶ ಮತ್ತಿಹಳ್ಳಿ, ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಘಟನಾ ಸಮಿತಿ ಪ್ರಧಾನ ಸಂಚಾಲಕ ಶ್ರೀಕುಮಾರ್ ಎಂ.ಎ, ಮಂಜೇಶ್ವರ ಎಇಒ ರಾಜಗೋಪಾಲ ಕೆ., ಮಂಗಲ್ಪಾಡಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಇರ್ಫಾನಾ ಇಕ್ಬಾಲ್, ಖೈರುನ್ನಿಸಾ ಮುಟ್ಟಂ, ಮಹಮ್ಮದ್ ಹುಸೇನ್ ಮಾತನಾಡಲಿದ್ದಾರೆ. ಪ್ರತಿದಿನ ಸುಮಾರು ಹತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಂಘಟಕರು ಮಾಹಿತಿ ನೀಡಿದರು.
21ರಂದು ನಡೆಯುವ ಸಮಾರೋಪ ಸಮಾರಂಭವನ್ನು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸುವರು. ಕಲೋತ್ಸವದ ಸಿದ್ದತೆಗಳು ಪೂರ್ಣಗೊಂಡಿದೆ ಎಂದು ಸಂಘಟಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘಟನಾ ಸಮಿತಿ ಅಧ್ಯಕ್ಷೆ ರುಬೀನಾ ನೌಫಲ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಹನೀಫ್ ಪಿ.ಕೆ, ಜಿಲ್ಲಾ ಪಂಚಾಯತಿ ಸದಸ್ಯ ರಹ್ಮಾನ್ ಗೋಲ್ಡನ್, ಮಂಗಲ್ಪಾಡಿ ಪಂಚಾಯತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಎಇಓ ರಾಜಗೋಪಾಲ.ಕೆ, ಪಂಚಾಯತಿ ಸದಸ್ಯ ಮಜೀದ್ ಪಚ್ಚಂಬಳ, ಪ್ರಾಂಶುಪಾಲ ಶ್ರೀಕುಮಾರ್ ಎಂ.ಎ, ಪಿ.ಟಿ.ಎ ಅಧ್ಯಕ್ಷ ಮುಹಮ್ಮದ್ ಉಪ್ಪಳ ಗೇಟ್, ನೌಶಾದ್ ಕೆ.ಪಿ.ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.