ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಅಮೆರಿಕ ನಿರ್ಬಂಧಗಳ ಕುರಿತ ವರದಿಗಳನ್ನು ಗಮನಿಸಿದ್ದೇವೆ. ಭಾರತವು ಕಾರ್ಯತಂತ್ರದ ವ್ಯಾಪಾರ ಮತ್ತು ಪ್ರಸರಣ ರಹಿತ ನಿಯಂತ್ರಣಗಳ ಮೇಲೆ ಬಲವಾದ ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ಹೊಂದಿದೆ. ನಾವು ಮೂರು ಪ್ರಮುಖ ಬಹುಪಕ್ಷೀಯ ಪ್ರಸರಣ ರಹಿತ ರಫ್ತು ನಿಯಂತ್ರಣ ವ್ಯವಸ್ಥೆಗಳ ಸದಸ್ಯರೂ ಆಗಿದ್ದೇವೆ ಎಂದು ಹೇಳಿದರು.
'ಅನ್ವಯವಾಗುವ ರಫ್ತು ನಿಯಂತ್ರಣ ನಿಬಂಧನೆಗಳ ಬಗ್ಗೆ ಭಾರತೀಯ ಕಂಪನಿಗಳಿಗೆ ಅರಿವು ಮೂಡಿಸಲು ನಾವು ಎಲ್ಲಾ ಸಂಬಂಧಿತ ಇಲಾಖೆಗಳು ಮತ್ತು ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅಲ್ಲದೆ, ಜಾರಿಗೆ ತರುತ್ತಿರುವ ಹೊಸ ಕ್ರಮಗಳ ಬಗ್ಗೆಯೂ ಅವರಿಗೆ ತಿಳಿಸಲಾಗುತ್ತಿದೆ. ಈ ಕ್ರಮಗಳು ಕೆಲವು ಸಂದರ್ಭಗಳಲ್ಲಿ ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರಬಹುದು ಎಂದರು.
ರಷ್ಯಾದ ಮಿಲಿಟರಿ-ಕೈಗಾರಿಕಾ ಸಂಸ್ಥೆಗಳನ್ನು ಬೆಂಬಲಿಸಿದ್ದಕ್ಕಾಗಿ 275 ವ್ಯಕ್ತಿಗಳು ಮತ್ತು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಅದರಲ್ಲಿ 19 ಭಾರತೀಯ ಕಂಪನಿಗಳು ಸೇರಿವೆ. ರಷ್ಯಾಕ್ಕೆ ಸುಧಾರಿತ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಪೂರೈಸಿದ್ದಕ್ಕಾಗಿ ಚೀನಾ, ಸ್ವಿಟ್ಜರ್ಲೆಂಡ್, ಥೈಲ್ಯಾಂಡ್ ಮತ್ತು ಟರ್ಕಿಯ ಕಂಪನಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಯುಎಸ್ ಖಜಾನೆ ಇಲಾಖೆ ತಿಳಿಸಿತ್ತು. ರಷ್ಯಾ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಂಡಿರುವ ಅಮೆರಿಕ ಬುಧವಾರ 398 ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಭಾರತ, ರಷ್ಯಾ, ಚೀನಾ, ಹಾಂಗ್ ಕಾಂಗ್, ಯುಎಇ, ಟರ್ಕಿ, ಥೈಲ್ಯಾಂಡ್, ಮಲೇಷ್ಯಾ, ಸ್ವಿಟ್ಜರ್ಲೆಂಡ್ ಸೇರಿದಂತೆ ಹನ್ನೆರಡು ದೇಶಗಳ ಈ ಕಂಪನಿಗಳನ್ನು ಬ್ಲಾಕ್ ಲಿಸ್ಟ್ ಮಾಡಿದೆ.