ಲಖನೌ: ಬ್ರಿಟನ್ ಪೌರತ್ವ ಹೊಂದಿರುವ ಆರೋಪದ ಮೇಲೆ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಡಿಸೆಂಬರ್ 19ರೊಳಗೆ ನಿರ್ಧಾರ ಕೈಗೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ.
ಹೈಕೋರ್ಟ್‌ನ ಲಖನೌ ಪೀಠವು ಕೇಂದ್ರಕ್ಕೆ ಸೂಚನೆಗಳನ್ನು ನೀಡಿದ್ದು ಈ ಪ್ರಾತಿನಿಧ್ಯದ ಮೇಲೆ ತೆಗೆದುಕೊಂಡ ಕ್ರಮದ ವಿವರಗಳನ್ನು ಕೇಳಿದೆ. ರಾಹುಲ್ ಗಾಂಧಿಯ ಪೌರತ್ವ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಸ್ ವಿಘ್ನೇಶ್ ಶಿಶಿರ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಮೇಲೆ ನ್ಯಾಯಮೂರ್ತಿಗಳಾದ ಎಆರ್ ಮಸೂದಿ ಮತ್ತು ಸುಭಾಷ್ ವಿದ್ಯಾರ್ಥಿ ಅವರ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಮೂರು ವಾರಗಳಲ್ಲಿ ಈ ಸಂಬಂಧ ಗೃಹ ಸಚಿವಾಲಯದಿಂದ ಸೂಚನೆಗಳನ್ನು ಪಡೆದು ಮುಂದಿನ ದಿನಾಂಕದಂದು ಉತ್ತರವನ್ನು ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ಬಿ ಪಾಂಡೆ ಅವರಿಗೆ ನ್ಯಾಯಾಲಯ ಸೂಚಿಸಿದೆ.
ಪೌರತ್ವ ಪ್ರಕರಣದ ಸಿಬಿಐ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ನವೆಂಬರ್ 6 ರಂದು ದೆಹಲಿ ಹೈಕೋರ್ಟ್‌ಗೆ ತಿಳಿಸಲಾಯಿತು. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರ ದೆಹಲಿ ಹೈಕೋರ್ಟ್‌ನಲ್ಲಿ ರಾಹುಲ್ ಗಾಂಧಿ ಪೌರತ್ವ ಪ್ರಕರಣವನ್ನು ದಾಖಲಿಸಿದ್ದು ರಾಹುಲ್ ಗಾಂಧಿಯ ಭಾರತೀಯ ಪೌರತ್ವವನ್ನು ರದ್ದುಗೊಳಿಸುವಂತೆ ತಮ್ಮ ಪ್ರಾತಿನಿಧ್ಯವನ್ನು ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನವನ್ನು ಕೋರಿದ್ದರು.