ಕೀವ್: ಉಕ್ರೇನ್‌ನ ಇಂಧನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
ರಷ್ಯಾ ಸೇನೆಯು ಕೀವ್, ಹಾರ್ಕಿವ್, ರಿವ್ನೆ, ಖ್ಮೆಲ್ನಿಟ್‌ಸ್ಕಿ, ಲುಟ್‌ಸ್ಕ್ ಮತ್ತಿತರ ನಗರಗಳು ಸೇರಿ ದೇಶದ ಪಶ್ಚಿಮ ಭಾಗದಲ್ಲಿ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಈ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್‌ಗಳ ಸುರಿಮಳೆಗರೆದಿದೆ. ಸುಮಾರು 200ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿಯಾಗಿದೆ.
ವಿದ್ಯುತ್ ಗ್ರಿಡ್‌ಗಳು ಮತ್ತು ಇಂಧನ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ಮನೆಗಳು ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿವೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಎರಡು ವಾರಗಳಿಗೂ ಕಡಿಮೆ ಅವಧಿಯಲ್ಲಿ ಉಕ್ರೇನ್‌ನ ವಿದ್ಯುತ್ ಗ್ರಿಡ್ ಮೇಲೆ ರಷ್ಯಾ ನಡೆಸಿದ ಭಾರಿ ಪ್ರಮಾಣದ ಎರಡನೇ ಪ್ರಮುಖ ವೈಮಾನಿಕ ದಾಳಿ ಇದಾಗಿದೆ. ಚಳಿಗಾಲಕ್ಕೂ ಮೊದಲು ದೇಶದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಗುರಿಯನ್ನು ಈ ದಾಳಿ ಹೊಂದಿದ್ದು, ಇದು ಉಕ್ರೇನ್ ನಾಗರಿಕರ ಆತಂಕವನ್ನು ಹೆಚ್ಚಿಸಿದೆ.
'ರಷ್ಯಾ ಉಡಾಯಿಸಿರುವ ಕ್ಲಸ್ಟರ್ ಬಾಂಬ್‌ಗಳಿದ್ದ ಕ್ರೂಸ್ ಕ್ಷಿಪಣಿಗಳು ಕೆಲವು ಕಡೆ ಜನವಸತಿ ಪ್ರದೇಶಗಳಲ್ಲಿ ಅಪ್ಪಳಿಸಿವೆ. ಇದು ಯುದ್ಧದ ಕೃತ್ರಿಮ ಉಲ್ಬಣಿಸುವಿಕೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
'ಉಕ್ರೇನ್‌ನಾದ್ಯಂತ ಇಂಧನ ಸೌಲಭ್ಯಗಳ ಮೇಲೆ ದಾಳಿಗಳು ನಡೆಯುತ್ತಿವೆ. ದೇಶದಾದ್ಯಂತ ತುರ್ತು ವಿದ್ಯುತ್ ನಿಲುಗಡೆ ಜಾರಿಗೊಳಿಸಲಾಗಿದೆ' ಎಂದು ಇಂಧನ ಸಚಿವ ಹರ್ಮನ್ ಹಲುಶ್ಚೆಂಕೊ 'ಫೇಸ್‌ಬುಕ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉಕ್ರೇನ್‌ನ ವಿದ್ಯುತ್ ಗ್ರಿಡ್‌ಗಳ ಮೇಲೆ ಚಳಿಗಾಲದ ಪೂರ್ವದಲ್ಲಿ ವೈಮಾನಿಕ ದಾಳಿ ನಡೆಸಲು ರಷ್ಯಾ ಕ್ರೂಸ್ ಮತ್ತು ಗುರಿ ನಿರ್ದೇಶಿತ ಕ್ಷಿಪಣಿಗಳನ್ನು ಸಂಗ್ರಹಿಸುತ್ತಿದೆ ಎಂದು ಉಕ್ರೇನ್ ಅಧಿಕಾರಿಗಳು ಇತ್ತೀಚೆಗಷ್ಟೇ ಎಚ್ಚರಿಸಿದ್ದರು. ರಷ್ಯಾ ಪಡೆಗಳು ಚಳಿಗಾಲವನ್ನು ಅಸ್ತ್ರವಾಗಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು.
ರಷ್ಯಾ, ಉಕ್ರೇನ್‌ಗೆ ಕೀತ್ ವಿಶೇಷ ರಾಯಭಾರಿ
ವಾಷಿಂಗ್ಟನ್(ಪಿಟಿಐ):ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದ ನಿವೃತ್ತ ಜನರಲ್ ಕೀತ್ ಕೆಲ್ಲಾಗ್ ಅವರನ್ನು ರಷ್ಯಾ ಮತ್ತು ಉಕ್ರೇನ್‌ಗೆ ವಿಶೇಷ ರಾಯಭಾರಿಯಾಗಿ ನೇಮಕ ಮಾಡುವುದಾಗಿ ಬುಧವಾರ ಘೋಷಿಸಿದ್ದಾರೆ.
'ಕೀತ್ ಅವರನ್ನು ಅಧ್ಯಕ್ಷರ ಸಹಾಯಕರಾಗಿ ಮತ್ತು ಉಕ್ರೇನ್ ಹಾಗೂ ರಷ್ಯಾಕ್ಕೆ ವಿಶೇಷ ರಾಯಭಾರಿಯಾಗಿ ನೇಮಕ ಮಾಡಲು ನನಗೆ ತುಂಬಾ ಸಂತೋಷವಾಗಿದೆ' ಎಂದು ಟ್ರಂಪ್ ಹೇಳಿದ್ದಾರೆ.