ನವದೆಹಲಿ: ಸರ್ಕಾರಿ ಅಧಿಕಾರಿಗಳಿಗೆ 2,100 ಕೋಟಿ ರೂ ಲಂಚ ನೀಡಿರುವ ವಿಷಯವಾಗಿ ಅಮೆರಿಕದಲ್ಲಿ ದೋಷಾರೋಪಣೆಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು ಅದಾನಿ ವಿರುದ್ಧದ ಅಮೇರಿಕಾ ಆರೋಪದಲ್ಲಿ ಉಲ್ಲೇಖವಾಗಿರುವ ನಾಲ್ಕು ರಾಜ್ಯಗಳ ಪೈಕಿ ಎಲ್ಲಿಯೂ ಬಿಜೆಪಿ ಸರ್ಕಾರಗಳು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದೆ.
ಇದು ತನ್ನ ನಾಯಕನನ್ನು ಟಾರ್ಗೆಟ್ ಮಾಡುವುದಕ್ಕೆ ದೀರ್ಘಾವಧಿಯಿಂದ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆಯಷ್ಟೇ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಬಿಜೆಪಿ ವಕ್ತಾರ, ಸಂಸದ ಸಂಬಿತ್ ಪಾತ್ರ, ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ ಸಮರ್ಥನೆ ನೀಡಬೇಕಿರುವುದು ಅದಾನಿ ಸಮೂಹವಷ್ಟೆ, ಉಳಿದ ವಿಷಯಗಳಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
2002 ರಿಂದಲೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಿಂದ ಪ್ರಧಾನಿ ಮೋದಿ ಅವರ ಘನತೆಯನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅದರಲ್ಲಿ ಈ ವರೆಗೂ ಯಶಸ್ಸು ಸಿಕ್ಕಿಲ್ಲ. ವಿಪಕ್ಷಗಳು ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ವಿದೇಶಗಳಲ್ಲಿ ಮೋದಿ ಅವರನ್ನು ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.
ಮೋದಿ ಅವರು ಉದ್ಯಮಿಯೊಂದಿಗೆ ಸಾಮೀಪ್ಯ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಪ್ರತಿಪಕ್ಷಗಳು ಅವರ ವಿಶ್ವಾಸಾರ್ಹತೆಯನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ರಾಹುಲ್ ಗಾಂಧಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆಳುವ ವಿವಿಧ ರಾಜ್ಯಗಳಲ್ಲಿ ಅದಾನಿ ಸಮೂಹದ ಹೂಡಿಕೆಯನ್ನು ಉಲ್ಲೇಖಿಸಿದ ಪಾತ್ರಾ ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕ್ರಮವಾಗಿ ಭೂಪೇಶ್ ಬಾಘೆಲ್ ಮತ್ತು ಅಶೋಕ್ ಗೆಹ್ಲೋಟ್ ಚುಕ್ಕಾಣಿ ಹಿಡಿದಾಗ 25 ಸಾವಿರ ಕೋಟಿ ಮತ್ತು 65 ಸಾವಿರ ಕೋಟಿ ರೂ ಹೂಡಿಕೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಡಿಎಂಕೆ ಆಡಳಿತದ ತಮಿಳುನಾಡಿನಲ್ಲಿ ಸಂಘಟಿತ ಸಂಸ್ಥೆಯು 45 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಮತ್ತು ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಕೌಶಲ್ಯ ಅಭಿವೃದ್ಧಿ ಪ್ರತಿಷ್ಠಾನಕ್ಕಾಗಿ 100 ಕೋಟಿ ರೂಪಾಯಿ ದೇಣಿಗೆ ನೀಡಿದೆ, ಅದಾನಿ ಭ್ರಷ್ಟರಾಗಿದ್ದರೆ, ಕಾಂಗ್ರೆಸ್ ಸರ್ಕಾರಗಳು ಅವರ ಕಂಪನಿಯಿಂದ ಬಂಡವಾಳ ಹೂಡಿಕೆಗೆ ಏಕೆ ಮುಂದಾಗಿವೆ ಎಂದು ಪಾತ್ರ ಪ್ರಶ್ನಿಸಿದರು.
ರಾಹುಲ್ ಗಾಂಧಿ ಅವರು ಎಲ್ಲಾ ರೀತಿಯ ಆರೋಪಗಳನ್ನು ಮಾಡುವ ಮೂಲಕ ಭಾರತದ ಆರ್ಥಿಕತೆಯನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಗುರುವಾರ ಸಹ 2.5 ಕೋಟಿ ಹೂಡಿಕೆದಾರರು ಷೇರು ಮಾರುಕಟ್ಟೆ ಕುಸಿದಿದ್ದರಿಂದ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.