ಮ್ಯಾಡ್ರಿಡ್: ಸ್ಪೇನ್‌ನಲ್ಲಿ ಭಾರಿ ಮಳೆಯಿಂದಾಗಿ ದಕ್ಷಿಣದ ಪ್ರಾಂತ್ಯಗಳಲ್ಲಿ ಸಂಭವಿಸಿರುವ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 205ಕ್ಕೆ ಏರಿಕೆಯಾಗಿದೆ. ಭೂಕುಸಿತ ಹಾಗೂ ಮಳೆ ನಿರಂತರವಾಗಿರುವುದು ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.
ವೆಲೆನ್ಸಿಯಾದಲ್ಲೇ ಬರೋಬ್ಬರಿ 202 ಮಂದಿ ಮೃತಪಟ್ಟಿದ್ದು, ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ.
ಇಲ್ಲಿನ ಸುಮಾರು 75,000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಸ್ಥಳೀಯ ನಾಯಕ ಕಾರ್ಲೋಸ್ ಮಜಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನೆರೆಯ ಪ್ರಾಂತ್ಯಗಳಲ್ಲಿ ಮೂರು ಸಾವು ಸಂಭವಿಸಿವೆ. ಮುಳುಗಡೆಯಾಗಿರುವ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರಿಗಾಗಿ ಶೋಧ ಮುಂದುವರಿದಿದೆ. ಹೀಗಾಗಿ, ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕವಿದೆ.
ಗುರುವಾರ ಮತ್ತು ಶುಕ್ರವಾರ ರಾತ್ರಿ ಇತರ ಪ್ರಾಂತ್ಯಗಳಲ್ಲಿಯೂ ಜೋರು ಮಳೆಯಾಗಿದೆ. ಅಂಡಲೂಸಿಯಾದಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಪಶ್ಚಿಮದ ಹುಯೆಲ್ವಾ ಪ್ರಾಂತ್ಯ ಸಹ ಮಳೆಯಿಂದ ತತ್ತರಿಸಿದೆ. ಶುಕ್ರವಾರ 'ಹಾಲೊವೀನ್' ಆಚರಣೆಯ ಸಂಭ್ರಮಲ್ಲಿದ್ದ ಇಲ್ಲಿನ ಜನರಿಗೆ ಮನೆಗಳಿಂದ ಹೊರಗೆ ಬರದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ರಾಷ್ಟ್ರೀಯ ಪೊಲೀಸ್ ಪಡೆ, ಸಿವಿಲ್ ಗಾರ್ಡ್ ಮತ್ತು ಇತರ ಭದ್ರತಾ ಪಡೆಗಳ ನೂರಾರು ಅಧಿಕಾರಿಗಳೊಂದಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಸೇನೆಯು 750 ಯೋಧರನ್ನು ಕಳುಹಿಸಿದೆ ಎಂದು ಸ್ಪೇನ್ ರಕ್ಷಣಾ ಸಚಿವಾಲಯ ತಿಳಿಸಿದೆ.