ನವದೆಹಲಿ/ ರಿಯೋ ಡಿ ಜನೈರೊ: ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್
ಪ್ರದೇಶಗಳಲ್ಲಿ ನಿಯೋಜಿಸಿರುವ ತಮ್ಮ ಸೇನೆಗಳನ್ನು ಚೀನಾ ಹಾಗೂ ಭಾರತದ ವಾಪಸ್ ಕರೆಸಿದ ಬಳಿಕ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದರು.
ಬ್ರೆಜಿಲ್‌ನ ಡಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಎರಡೂ ದೇಶಗಳ ಉನ್ನತ ಮಟ್ಟದ ನಿಯೋಗವು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾತುಕತೆ ನಡೆಸಿದವು.
ಸಭೆ ಕುರಿತು 'ಎಕ್ಸ್'ನಲ್ಲಿ ತಿಳಿಸಿರುವ ವಿದೇಶಾಂಗ ಸಚಿವ ಜೈಶಂಕರ್, 'ಗಡಿ ಭಾಗದಲ್ಲಿ ಸೇನೆ ಹಿಂದಕ್ಕೆ ಪಡೆದ ಬಳಿಕ ಉಭಯ ರಾಷ್ಟ್ರಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯಿಟ್ಟಿವೆ. ಜಾಗತಿಕ ಸ್ಥಿತಿಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ' ಎಂದು ತಿಳಿಸಿದರು.
ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯು ಅಕ್ಟೋಬರ್‌ನಲ್ಲಿ ಮುಕ್ತಾಯಗೊಂಡಿತ್ತು. ಗಡಿ ವಿವಾದ ಬಗೆಹರಿಸಲು ಶೀಘ್ರದಲ್ಲಿಯೇ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದವು. ನಂತರ, ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಡೆಮ್‌ಚೋಕ್, ಡೆಪ್ಸಾಂಗ್ ಪ್ರದೇಶದಲ್ಲಿ ಗಸ್ತು ಆರಂಭಿಸಿದ್ದವು.
ಪೂರ್ವ ಲಡಾಖ್ ವಲಯದಲ್ಲಿ ನಾಲ್ಕು ವರ್ಷಗಳಿಂದ ಇದ್ದ ಅನಿಶ್ಚಿತ ವಾತಾವರಣ, ಬಿಗುವಿನ ಪರಿಸ್ಥಿತಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದೇ ವ್ಯಾಖ್ಯಾನಿಸಲಾಗಿತ್ತು.
ಬ್ರೆಜಿಲ್‌ನ ಡಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನೇತೃತ್ವದ ನಿಯೋಗವು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನೇತೃತ್ವದ ನಿಯೋಗದ ಜೊತೆ ಸೋಮವಾರ ರಾತ್ರಿ ಸಭೆ ನಡೆಸಿತು.