ಮಂಜೇಶ್ವರ: ಮಂಜೇಶ್ವರ ವಿಧಾನಸಬಾ ಕ್ಷೇತ್ರದ ಚುನಾವಣಾ ತಕರಾರು ಅರ್ಜಿ ಪರಿಗಣನೆ ಹೈಕೋರ್ಟಿನಲ್ಲಿ ನ. 20ರಂದು ನಡೆಯಲಿದೆ. ಚುನಾವಣಾ ತಕಾರಾರು ಅರ್ಜಿಗೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ್ದು, ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.
2021ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿಯಾಗಿದ್ದ ಸುಂದರ ಅವರಿಗೆ ಎರಡೂವರೆ ಲಕ್ಷ ರೂಪಾಯಿ ಮತ್ತು ಸ್ಮಾರ್ಟ್‍ಫೆÇೀನ್ ನೀಡಿ ಚುನಾವಣೆಯಿಂದ ಹಿಂದಕ್ಕೆ ಸರಿಯುವಂತೆ ಬಿಜೆಪಿ ಮುಖಂಡರು ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗದಿಂದ ಸ್ಪರ್ಧಿಸಿದ್ದ ವಿ.ವಿ ರಮೇಶನ್ ಬದಿಯಡ್ಕ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸಲಾಗಿತ್ತು. ತಮ್ಮ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ವಾಸ್ತವ ವಿರುದ್ಧವಾಗಿದ್ದು, ಕಾನೂನು ಪ್ರಕಾರ ಇದು ನೆಲೆನಿಲ್ಲದೆಂದೂ, ಪ್ರಕರಣವನ್ನು ರದ್ದುಪಡಿಸುವಂತೆಯೂ ಕೋರಿ ಕೆ.ಸುರೇಂದ್ರನ್ ಸೇರಿದಂತೆ ಇತರರು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ಪರಿಗಣಿಸಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಮುಖಂಡರಾದ ವಿ. ಬಾಲಕೃಷ್ಣ ಶೆಟ್ಟಿ, ಸುನಿಲ್ ನಾಯ್ಕ್, ಮಣಿಕಂಠ ರೈ, ವೈ. ಸುರೇಶ್ ಹಾಗೂ ಲೋಕೇಶ್ ನೋಂಡ ಖುಲಾಸೆಗೊಂಡಿದ್ದರು.