ನವದೆಹಲಿ:ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ರಾಕೆಟ್ ತಯಾರಿಕೆ ಕಂಪನಿ ಸ್ಪೇಸ್‌ಎಕ್ಸ್ ಇಸ್ರೋದೊಂದಿಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದ್ದು, ಮುಂದಿನ ವಾರದ ಆರಂಭದಲ್ಲಿ ತನ್ನ ಫಾಲ್ಕನ್ 9 ರಾಕೆಟ್ ಮೂಲಕ ಭಾರತದ ಜಿಸ್ಯಾಟ್-20 ಉಪಗ್ರಹವನ್ನು ಉಡಾವಣೆಗೊಳಿಸಲಿದೆ.
ಇದು ಇಸ್ರೋ ಮತ್ತು ಸ್ಪೇಸ್‌ಎಕ್ಸ್ ನಡುವೆ ಹಲವು ವಾಣಿಜ್ಯ ಸಹಭಾಗಿತ್ವಗಳಲ್ಲಿ ಮೊದಲನೆಯದಾಗಿದೆ. ಅಮೆರಿಕದ ಚುನಾಯಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಡಳಿತದಡಿ ಚೊಚ್ಚಲ ಒಪ್ಪಂದವೂ ಆಗಿದೆ. ಮಸ್ಕ್ ಟ್ರಂಪ್ ಅವರ ಆಪ್ತ ಮಿತ್ರನಾಗಿದ್ದಾರೆ.
4,700 ಕೆ.ಜಿ ತೂಗುವ ಜಿಸ್ಯಾಟ್-20 ಉಪಗ್ರಹವು ಭಾರತದ ಸ್ವಂತ ರಾಕೆಟ್‌ಗಳ ಹೊತ್ತೊಯ್ಯುವ ಸಾಮರ್ಥ್ಯವನ್ನು ಮೀರಿದೆ. ಹೀಗಾಗಿ ಇಸ್ರೋ ಅದರ ಉಡಾವಣೆಗಾಗಿ ಸ್ಪೇಸ್ ಎಕ್ಸ್‌ನ್ನು ಆಯ್ಕೆ ಮಾಡಿಕೊಂಡಿದೆ. ಅಮೆರಿಕದ ಕೇಪ್ ಕೆನವರಲ್‌ನಿಂದ ಉಡಾವಣೆಗೊಳ್ಳಲಿರುವ ಉಪಗ್ರಹವು 14 ವರ್ಷಗಳ ಕಾಲ ಕಾರ್ಯಾಚರಿಸಲಿದೆ.
ಹಿಂದೆ ಇಸ್ರೋ ಇಂತಹ ಭಾರೀ ಉಪಗ್ರಹಗಳ ಉಡಾವಣೆಗಾಗಿ ಫ್ರೆಂಚ್ ವಾಣಿಜ್ಯಉಡಾವಣಾ ಸೇವೆಗಳ ಪೂರೈಕೆದಾರ ಏರಿಯನ್‌ಸ್ಪೇಸ್ ಅನ್ನು ಅವಲಂಬಿಸಿತ್ತು,ಆದರೆ ಆ ಕಂಪನಿಯು ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಯಾವುದೇ ರಾಕೆಟ್‌ನ್ನು ಹೊಂದಿಲ್ಲ. ಅಲ್ಲದೆ ಉಕ್ರೇನ್ ಸಂಘರ್ಷದಿಂದಾಗಿ ರಷ್ಯಾ ಈ ಉಪಗ್ರಹವನ್ನು ಉಡಾವಣೆಗೊಳಿಸುವ ಯಾವುದೇ ಸಾಧ್ಯತೆಯಿಲ್ಲ. ಚೀನಾ ಆಯ್ಕೆಯಿಂದ ಹೊರಗಿದೆ,ಹೀಗಾಗಿ ಸ್ಪೇಸ್‌ಎಕ್ಸ್ ಭಾರತಕ್ಕೆ ಲಭ್ಯವಿರುವ ಅತ್ಯುತ್ತಮ ಆಯ್ಕೆಯಾಗಿದೆ.
ಜಿಸ್ಯಾಟ್-20 ದೂರದ ಪ್ರದೇಶಗಳಿಗೆ ಇಂಟರ್ನೆಟ್ ಸಂಪರ್ಕ ಸೇರಿದಂತೆ ದೇಶಾದ್ಯಂತ ಪ್ರಮುಖ ಸೇವೆಗಳನ್ನು ಒದಗಿಸಲಿದೆ.
'ಈ ಚೊಚ್ಚಲ ಉಡಾವಣೆಯೊಂದಿಗೆ ನಾವು ಸ್ಪೇಸ್‌ಎಕ್ಸ್ ಜೊತೆ ಉತ್ತಮ ಒಪ್ಪಂದವನ್ನು ಮಾಡಿಕೊಂಡಿದ್ದೇವೆ' ಎಂದು ಬೆಂಗಳೂರಿನಲ್ಲಿರುವ ಇಸ್ರೋದ ವಾಣಿಜ್ಯ ವಿಭಾಗ ನ್ಯೂ ಸ್ಪೇಸ್ ಇಂಡಿಯಾ ಲಿ.ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ಅವರು ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ.
ಜಿಸ್ಯಾಟ್-20 ಉಪಗ್ರಹದ ಉಡಾವಣೆಗೆ 60ರಿಂದ 70 ಮಿಲಿಯನ್ ಡಾಲರ್ ವೆಚ್ಚವನ್ನು ಅಂದಾಜಿಸಲಾಗಿದೆ.
ಕಡಿಮೆ ವೆಚ್ಚದ ಉಪಗ್ರಹ ಉಡಾವಣೆಗಳಲ್ಲಿ ಸ್ಪೇಸ್‌ಎಕ್ಸ್ ಮತ್ತು ಇಸ್ರೋ ಪರಸ್ಪರ ಪ್ರತಿಸ್ಪರ್ಧಿಗಳು ಎಂದು ಕೆಲವರು ಪರಿಗಣಿಸಿದ್ದಾರೆ. ಆದರೆ ಜಾಗತಿಕ ಬಾಹ್ಯಾಕಾಶ ಉದ್ಯಮದಲ್ಲಿ ಸ್ಪೇಸ್‌ಎಕ್ಸ್‌ನ್ನು ನಾಯಕನನ್ನಾಗಿ ನೋಡಲಾಗುತ್ತಿದೆ.
ಇನ್ನೊಂದು ಸಂಬಂಧಿತ ಬೆಳವಣಿಗೆಯಲ್ಲಿ ಮಸ್ಕ್ ಭಾರತದಲ್ಲಿ ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಉಪಗ್ರಹ ಅಂತರ್ಜಾಲ ಸೇವೆಯ ಬಳಕೆ ಅನುಮತಿಗಾಗಿ ಲಾಬಿ ನಡೆಸುತ್ತಿದ್ದಾರೆ,ಆದರೆ ಅದಿನ್ನೂ ಭಾರತಿಯ ಸುರಕ್ಷತಾ ಅಗತ್ಯಗಳನ್ನು ಪೂರೈಸಬೇಕಿದೆ.
60 ಮಿಲಿಯನ್ ಡಾಲರ್ ವೆಚ್ಚದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿಯೋರ್ವರನ್ನು ಕಳುಹಿಸುವ ಸ್ಪೇಸ್‌ಎಕ್ಸ್‌ನೊಂದಿಗೆ ಇನ್ನೊಂದು ಒಪ್ಪಂದಕ್ಕೂ ಇಸ್ರೋ ಸಹಿ ಹಾಕಿದೆ.