ಭುವನೇಶ್ವರ: ಒಡಿಶಾದ ಕರಾವಳಿಯ 24 ಗ್ರಾಮಗಳನ್ನು ಯುನೆಸ್ಕೊದ 'ಅಂತರಸರ್ಕಾರಿ ಸಮುದ್ರವಿಜ್ಞಾನ ಆಯೋಗ'ವು (ಐಒಸಿ) 'ಸುನಾಮಿ ಎದುರಿಸಲು ಸನ್ನದ್ಧ' ಎಂದು ಗುರುತಿಸಿದೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಗ್ರಾಮಗಳು ಸಜ್ಜಾಗಿವೆ.
ಭುವನೇಶ್ವರ: ಒಡಿಶಾದ ಕರಾವಳಿಯ 24 ಗ್ರಾಮಗಳನ್ನು ಯುನೆಸ್ಕೊದ 'ಅಂತರಸರ್ಕಾರಿ ಸಮುದ್ರವಿಜ್ಞಾನ ಆಯೋಗ'ವು (ಐಒಸಿ) 'ಸುನಾಮಿ ಎದುರಿಸಲು ಸನ್ನದ್ಧ' ಎಂದು ಗುರುತಿಸಿದೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಗ್ರಾಮಗಳು ಸಜ್ಜಾಗಿವೆ.
ಇಂಡೋನೇಷ್ಯಾದಲ್ಲಿ ನ. 11ರಂದು ನಡೆದ ಎರಡನೇ ಜಾಗತಿಕ ಸುನಾಮಿ ವಿಚಾರಸಂಕಿರಣದಲ್ಲಿ ಈ ಮಾನ್ಯತೆಯನ್ನು ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬಾಲೇಶ್ವರ, ಭದ್ರಕ್, ಕೇಂದ್ರಪಾಡಾ, ಜಗತ್‌ಸಿಂಗ್‌ಪುರ, ಪುರಿ ಮತ್ತು ಗಂಜಾಮ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಗ್ರಾಮಗಳಿವೆ.
2020ರಲ್ಲಿ ಜಗತ್‌ಸಿಂಗ್‌ಪುರ ಜಿಲ್ಲೆಯ ನೋಲಿಯಾಸಾಹಿ ಮತ್ತು ಗಂಜಾಮ್ ಜಿಲ್ಲೆಯ ವೆಂಕಟರಾಯಪುರ ಗ್ರಾಮಕ್ಕೆ ನೀಡಲಾಗಿದ್ದ 'ಸುನಾಮಿ ಎದುರಿಸಲು ಸನ್ನದ್ಧ' ಸ್ಥಾನ-ಮಾನ ಪ್ರಮಾಣಪತ್ರವನ್ನು ನವೀಕರಿಸಲಾಗಿದೆ.
ಸುನಾಮಿಪೀಡಿತ ಈ 24 ಗ್ರಾಮಗಳಲ್ಲಿ ಸ್ಥಳೀಯರಿಗೆ ತರಬೇತಿ, ಸಮುದಾಯ ಜಾಗೃತಿ ಕಾರ್ಯಕ್ರಮಗಳು, ಸುನಾಮಿ ನಿರ್ವಹಣಾ ಯೋಜನೆಗಳ ತಯಾರಿಕೆ, ಅಣಕು ಪ್ರದರ್ಶನ ಹಾಗೂ ಸ್ಥಳಾಂತರದ ಮಾರ್ಗಗಳನ್ನು ಗುರುತಿಸುವ ವಿವಿಧ ಚಟುವಟಿಕೆ ನಡೆಸಲಾಗಿದೆ.
ಭಾರತೀಯ ರಾಷ್ಟ್ರೀಯ ಸಮುದ್ರವಿಜ್ಞಾನ ಮಾಹಿತಿ ಸೇವೆಗಳ ಕೇಂದ್ರದ ವಿಜ್ಞಾನಿಗಳು ಹಾಗೂ ಎನ್‌ಡಿಎಂಎ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರೀಯ ಸುನಾಮಿ ಸನ್ನದ್ಧ ಸ್ಥಿತಿಯನ್ನು ಗುರುತಿಸುವ ಮಂಡಳಿ ಸದಸ್ಯರು ಸೆಪ್ಟೆಂಬರ್‌ನಲ್ಲಿ ಈ ಹಳ್ಳಿಗಳಿಗೆ ಭೇಟಿ ನೀಡಿ 12 ಸೂಚಕಗಳನ್ನು ಪರಿಶೀಲಿಸಿದ ಬಳಿಕ, ಇಲ್ಲಿನ ಸಮುದಾಯವನ್ನು 'ಸುನಾಮಿ ಎದುರಿಸಲು ಸನ್ನದ್ಧ' ಸಮುದಾಯಗಳೆಂದು ಗುರುತಿಸಲು ಯುನೆಸ್ಕೊ- ಐಒಸಿಗೆ ಶಿಫಾರಸು ಮಾಡಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ 381 ಗ್ರಾಮಗಳನ್ನು ಸುನಾಮಿಪೀಡಿತ ಎಂದು ಗುರುತಿಸಲಾಗಿದೆ. ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು, ಕರಾವಳಿಯ ಈ ಎಲ್ಲ ಸ್ಥಳಗಳನ್ನು 'ಸುನಾಮಿ ಸನ್ನದ್ಧ' ಸಮುದಾಯಗಳನ್ನಾಗಿಸಲು ಕೆಲಸ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.