ಮುಂಬೈ: ಅನ್ಯಧರ್ಮಗಳಿಗೆ ಮತಾಂತರದ ನಂತರವೂ ಮೀಸಲು ಸೌಲಭ್ಯವನ್ನು ಪಡೆಯುತ್ತಿದ್ದ, ಪರಿಶಿಷ್ಟ ಪಂಗಡದ ಕೋಟಾದಡಿ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದಿದ್ದ 257 ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ.
ಮುಂಬೈ: ಅನ್ಯಧರ್ಮಗಳಿಗೆ ಮತಾಂತರದ ನಂತರವೂ ಮೀಸಲು ಸೌಲಭ್ಯವನ್ನು ಪಡೆಯುತ್ತಿದ್ದ, ಪರಿಶಿಷ್ಟ ಪಂಗಡದ ಕೋಟಾದಡಿ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದಿದ್ದ 257 ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ.
ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ಸಮಿತಿಯು ಇದಕ್ಕೂ ಮುನ್ನ ಪರಿಶಿಷ್ಟ ಪಂಗಡ ಕೋಟಾದಡಿ 13,858 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದನ್ನು ಗುರುತಿಸಿತ್ತು.
ಇತರೆ ಧರ್ಮಗಳಿಗೆ ಮತಾಂತರ ಹೊಂದುವ ಮೊದಲು, ಈ ವಿದ್ಯಾರ್ಥಿಗಳು ಹಿಂದೂ ಎಸ್.ಟಿ ಎಂದೂ ಮೀಸಲಾತಿ ಸೌಲಭ್ಯ ಪಡೆದಿದ್ದರು ಎಂದು ರಾಜ್ಯ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಮಂಗಲ್ ಪ್ರಭಾತ್ ಲೋಧಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2023ನೇ ಸಾಲಿಗಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ (ಐಟಿಐ) ಪ್ರವೇಶ ಪ್ರಕ್ರಿಯೆಯ ಸಂದರ್ಭದಲ್ಲಿ ಪರಿಶಿಷ್ಟ ಕೋಟಾದ ಹಲವು ವಿದ್ಯಾರ್ಥಿಗಳು, 'ಅನ್ಯಧರ್ಮಗಳಿಗೆ ಮತಾಂತರ ನಂತರವೂ ಬುಡಕಟ್ಟು ಸಮುದಾಯದವರಿಗೆ ಇದ್ದ ಮೀಸಲಾತಿ ಸೌಲಭ್ಯವನ್ನು ಈ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ' ಎಂದು ಸಚಿವರ ಗಮನಸೆಳೆದಿದ್ದರು. 2023ರ ಚಳಿಗಾಲದ ಅಧಿವೇಶನದಲ್ಲಿ ಇದು ಚರ್ಚೆಯಾಗಿದ್ದು, ಸಮಗ್ರ ತನಿಖೆಗೆ ಆದೇಶಿಸಲಾಗಿತ್ತು.
ಮೀಸಲಾತಿ ಸೌಲಭ್ಯದ ದುರ್ಬಳಕೆಯ ಜೊತೆಗೆ ಈ ಸಮಿತಿ, ಬುಡಕಟ್ಟು ಜನರ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ ಮತ್ತು ಆಚರಣೆಗಳ ರಕ್ಷಣೆಗಾಗಿ ಹಲವು ಕ್ರಮಗಳನ್ನು ಶಿಫಾರಸು ಮಾಡಿದೆ. ಈ ಶಿಫಾರಸುಗಳು ಬುಡಕಟ್ಟು ಜನರ ಅಸ್ಮಿತೆ ರಕ್ಷಿಸುವ ಉದ್ದೇಶ ಹೊಂದಿದ್ದು, ಸಂಬಂಧಿತ ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.