ಎರ್ನಾಕುಳಂ: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಆಧರಿಸಿ 26 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ ಎಂದು ಕೇರಳ ಸರ್ಕಾರ ಹೈಕೋರ್ಟ್‍ಗೆ ತಿಳಿಸಿದೆ.
ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ಪೀಠಕ್ಕೆ ರಾಜ್ಯ ಸರ್ಕಾರ ಎಸ್‍ಐಟಿಯ ಕ್ರಿಯಾ ವರದಿಯನ್ನು ಸಲ್ಲಿಸಿದೆ. ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಸಿ.ಎಸ್.ಸುಧಾ ಅವರು ವಿಶೇಷ ಪೀಠದ ನ್ಯಾಯಮೂರ್ತಿಗಳಾಗಿದ್ದಾರೆ.
ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯಲ್ಲಿ ಉಲ್ಲೇಖಿಸಿರುವ ಆರೋಪಗಳ ಆಧಾರದ ಮೇಲೆ ಭಾರತೀಯ ನಾಗರಿಕ ಸಂರಕ್ಷಣಾ ಸಂಹಿತೆ, 2023 ರ ಸೆಕ್ಷನ್ 173 ರ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡಕ್ಕೆ ನ್ಯಾಯಾಲಯದ ನಿರ್ದೇಶನವನ್ನು ಆಧರಿಸಿ ಈ ಕ್ರಮವನ್ನು ಮಾಡಲಾಗಿದೆ.
26 ಎಫ್‍ಐಆರ್‍ಗಳು ದಾಖಲಾಗಿದ್ದು, ಆರೋಪಿಗಳ ವಿವರವನ್ನೂ ಎಫ್‍ಐಆರ್‍ಗಳಲ್ಲಿ ತೋರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. 10 ಪ್ರಾಥಮಿಕ ತನಿಖೆಗಳು ನಡೆಯುತ್ತಿವೆ ಮತ್ತು 4 ಇತರ ಪ್ರಕರಣಗಳನ್ನು ಎಸ್‍ಐಟಿ ತನಿಖೆ ನಡೆಸುತ್ತಿದೆ ಎಂದು ಅದು ಹೇಳಿದೆ. ತನಿಖೆಯ ಪ್ರಗತಿ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಲಾಗಿದೆ.