ರಾಂಚಿ: ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರು ನವೆಂಬರ್ 26ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ. ಸೊರೇನ್ ಅವರು ಇಂದು (ಭಾನುವಾರ) ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ನವೆಂಬರ್ 23ರಂದು ಫಲಿತಾಂಶ ಪ್ರಕಟಗೊಂಡಿದ್ದು, ಜೆಎಂಎಂ ನೇತೃತ್ವದ 'ಇಂಡಿಯಾ' ಮೈತ್ರಿಕೂಟ 56 ಸ್ಥಾನಗಳನ್ನು ಗೆದ್ದುಕೊಂಡಿದೆ.
ಜೆಎಂಎಂ 34 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಹಾಗೂ ಆರ್‌ಜೆಡಿ ಕ್ರಮವಾಗಿ 16 ಮತ್ತು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.