ನವದೆಹಲಿ: ಮುಂಬೈ ಮತ್ತು ದೇಶದ ಇತರ ಹಲವು ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದೆ. ಆದರೆ ಸದ್ಯದ್ಯಲೇ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಸಿಎನ್ ಜಿ ದರ ಏರಿಕೆ ಮಾಡಿಲ್ಲ ಎಂದು ನಗರ ಅನಿಲ ಸಂಸ್ಥೆಗಳು ತಿಳಿಸಿವೆ.
ಅಡುಗೆ ಅನಿಲ ಹಾಗೂ ಆಟೋಮೊಬೈಲ್‌ಗಳಿಗೆ ಸಿಎನ್ ಜೆ ವಿತರಕ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್, ರಾಷ್ಟ್ರ ರಾಜಧಾನಿ ಹೊರತುಪಡಿಸಿ ಪಕ್ಕದ ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂ. ಹೆಚ್ಚಳ ಮಾಡಿದೆ.
ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ಇತರ ನಗರಗಳಲ್ಲಿ ಸಿಎನ್ ಜಿ ಬೆಲೆ ಹೆಚ್ಚಿಸಲಾಗಿದೆ. ಆದರೆ ಇನ್ನೂ ಕೆಲವೇ ವಾರಗಳಲ್ಲಿ ಚುನಾವಣೆ ಘೋಷಣೆಯಾಗಲಿರುವ ದೆಹಲಿಗೆ ದರ ಏರಿಕೆಯಿಂದ ವಿನಾಯಿತಿ ನೀಡಲಾಗಿದೆ.
ಮಹಾನಗರ ಗ್ಯಾಸ್ ಲಿಮಿಟೆಡ್(MGL) ಮುಂಬೈ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂಪಾ ಹೆಚ್ಚಿಸಿದೆ ಎಂದು MGL ವೆಬ್‌ಸೈಟ್ ತಿಳಿಸಿದೆ.
MGL ಮತ್ತು ಇತರ ಸಿಟಿ ಗ್ಯಾಸ್ ರಿಟೇಲರ್‌ಗಳಾದ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್, ಇನ್‌ಪುಟ್ ವೆಚ್ಚದಲ್ಲಿ ಶೇಕಡಾ 20 ರಷ್ಟು ಹೆಚ್ಚಳದ ಹೊರತಾಗಿಯೂ ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಬೆಲೆ ಏರಿಕೆಗಾಗಿ ಕಾಯುತ್ತಿದ್ದವು.
ಮತ್ತು ಮಹಾರಾಷ್ಟ್ರದಲ್ಲಿ ಅಸೆಂಬ್ಲಿ ಚುನಾವಣೆಗಳು ಮುಗಿಯುತ್ತಿದ್ದಂತೆಯೇ, ಎಂಜಿಎಲ್ ನವೆಂಬರ್ 22 ರಿಂದ ಜಾರಿಗೆ ಬರುವಂತೆ ಮುಂಬೈನಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂ. ಹೆಚ್ಚಳ ಮಾಡಿದ್ದು, ಇದರೊಂದಿಗೆ ಸಿಎನ್ ಜಿ ಬೆಲೆ 77 ಕ್ಕೆ ಏರಿಕೆಯಾಗಿದೆ.
ಇತರ ನಗರಗಳಲ್ಲೂ ಅನಿಲ ರಿಟೇಲ್ ವ್ಯಾಪಾರಿಗಳು ಸಹ ಸಿಎನ್‌ಜಿ ಬೆಲೆಯನ್ನು ಹೆಚ್ಚಿಸಿದ್ದಾರೆ. ಬೆಂಗಳೂರಿನಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ 86.85 ರೂ.ನಷ್ಟಿದೆ.