ಮುಂಬೈ: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ನಕಲಿ ಪೊಲೀಸರಂತೆ ನಟಿಸಿ, ವಾಟ್ಸ್ ಆಯಪ್ ವಿಡಿಯೊ ಕರೆ ಮುಖಾಂತರ ಬರೋಬ್ಬರಿ ₹3.57 ಕೋಟಿ ವಂಚಿಸಿರುವ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಂತ್ರಸ್ತನನ್ನು ಉಲ್ಹಾಸ್‌ನಗರದ 74 ವರ್ಷದ ನಿವಾಸಿ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಅಪರಿಚಿತ ವಾಟ್ಸ್ ಆಯಪ್ ವಿಡಿಯೊ ಕರೆಯನ್ನು ಸಂತ್ರಸ್ತ ಸ್ವೀಕರಿಸಿದ್ದಾರೆ. ಈ ವೇಳೆ ಆರೋಪಿಯು ಪೊಲೀಸರಂತೆ ನಟಿಸಿ ಬೆದರಿಕೆ ಹಾಕಿದ್ದಾನೆ. ಇದೇ ಸಂದರ್ಭದಲ್ಲಿ ₹3.57 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಿಕೊಂಡನು ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರುದಾರನಿಗೆ ಯಾವ ರೀತಿಯ ಬೆದರಿಕೆಗಳನ್ನು ಹಾಕಲಾಗಿದೆ ಎಂಬುದನ್ನು ಎಫ್‌ಐಆರ್‌ನಲ್ಲಿ ಸ್ಪಷ್ಟಪಡಿಸಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.