ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಸಾಗಿಸುತ್ತಿದ್ದ ಅಂದಾಜು ₹36,000 ಕೋಟಿ ಮೌಲ್ಯದ ಸುಮಾರು 6,000 ಕೆ.ಜಿ 'ಮೆಥಂಫೆಟಮೀನ್' ಎಂಬ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ದೇಶದ ಇತಿಹಾಸದಲ್ಲೇ ಸಾಗರದಲ್ಲಿ ನಡೆದ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈರನ್ ದ್ವೀಪದ ಸಮೀಪದಿಂದ ಥಾಯ್ಲೆಂಡ್‌ಗೆ ನಿಷೇಧಿತ ಮಾದಕವಸ್ತುಗಳನ್ನು ಸಾಗಿಸಲು ಯತ್ನಿಸಲಾಗಿತ್ತು. ಘಟನೆ ಸಂಬಂಧ ಮ್ಯಾನ್ಮಾರ್ ಮೂಲದ ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಾಂತ್ರಿಕ ತೊಂದರೆ ಎದುರಾಗಿ ಮೀನುಗಾರಿಕಾ ದೋಣಿ, ಥಾಯ್ಲೆಂಡ್‌ನತ್ತ ಸಾಗುವ ಬದಲು ಭಾರತೀಯ ಸಮುದ್ರದತ್ತ ಚಲಿಸಿತ್ತು ಎಂದು ಅಂದಾಜಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
'ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಬಂಧಿತರಿಂದ ಸ್ಯಾಟಲೈಟ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಕ್ರಿಸ್ಮಸ್, ಹೊಸವರ್ಷಾಚರಣೆ ಆಗಮಿಸುತ್ತಿರುವಂತೆಯೇ ಥಾಯ್ಲೆಂಡ್‌ನಲ್ಲಿ ಮಾದಕವಸ್ತುಗಳಿಗೆ ಭಾರಿ ಬೇಡಿಕೆಯಿದೆ. ಟೀ ಪೊಟ್ಟಣದಲ್ಲಿ ಡ್ರಗ್ಸ್ ಪ್ಯಾಕ್ ಮಾಡಲಾಗಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.