HEALTH TIPS

ಮಣಿಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಇಬ್ಬರು ಸಚಿವರು, 3 ಶಾಸಕರ ಮನೆಗೆ ಬೆಂಕಿ

       ಇಂಫಾಲ: ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ದೇಹಗಳು ಮಣಿಪುರದ ಜಿರಿ ನದಿಯಲ್ಲಿ ಪತ್ತೆಯಾದ ಒಂದು ದಿನದ ಬಳಿಕ, ಶನಿವಾರ ರಾಜ್ಯ ರಾಜಧಾನಿ ಇಂಫಾಲದಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ. ನೂರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತ ಪ್ರತಿಭಟನಕಾರರು ಇಬ್ಬರು ಸಚಿವರು ಮತ್ತು ಮೂವರು ಶಾಸಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

       ಶುಕ್ರವಾರ ಪತ್ತೆಯಾಗಿರುವ ಮೂರು ಮೃತದೇಹಗಳು ಮಣಿಪುರದ ಜಿರಿಬಮ್ ಜಿಲ್ಲೆಯಲ್ಲಿ ಇತ್ತೀಚೆಗೆ ಅಪಹರಣಕ್ಕೊಳಗಾಗಿರುವ ಆರು ಜನರ ಪೈಕಿ ಮೂವರದ್ದೆಂದು ನಂಬಲಾಗಿದೆ. ಪರಿಹಾರ ಶಿಬಿರದಲ್ಲಿದ್ದ ಆರು ಮಂದಿಯನ್ನು ಸೋಮವಾರ ಅಪಹರಿಸಲಾಗಿತ್ತು.

          ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ನೂರಾರು ಜನರು ರಸ್ತೆಗಿಳಿದು ಪ್ರತಿಭಟಿಸಿದ ಬಳಿಕ ಇಂಫಾಲ್ ಪಶ್ಚಿಮದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಗಿದೆ. ಈ ಹತ್ಯೆಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.


         ಶನಿವಾರ ಬೆಳಗ್ಗೆ, ಉದ್ರಿಕ್ರ ಜನರ ಗುಂಪುಗಳು ವಾಹನಗಳು ಮತ್ತು ಕಟ್ಟಡಗಳಿಗೆ ಬೆಂಕಿ ಕೊಟ್ಟವು. ಪ್ರತಿಭಟನಕಾರರು ಮುಖ್ಯಮಂತ್ರಿ ಬೀರೇಂದ್ರ ಸಿಂಗ್‌ರ ಅಳಿಯ ರಾಜ್‌ಕುಮಾರ್ ಇಮೊ ಸಿಂಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಮ್ ರಂಜನ್, ಬಿಜೆಪಿ ನಾಯಕರಾದ ಉರಿಪೊಕ್ ಶಾಸಕ ರಘುಮಣಿ ಸಿಂಗ್ ಮತ್ತು ಪಟ್ಸೊಯಿ ಶಾಸಕ ಸಪಮ್ ಕುಂಜಕೇಶ್ವರ್ ಹಾಗೂ ಪಕ್ಷೇತರ ಶಾಸಕ ಸಪಮ್ ನಿಶಿಕಾಂತ ಅವರ ಮನೆಗಳ ಮೇಲೆ ದಾಳಿ ನಡೆಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

        ಇಂಫಾಲ್ ಪೂರ್ವ ಮತ್ತು ಇಂಪಾಲ್ ಪಶ್ಚಿಮ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

        ಜಿರಿಬಮ್‌ನಲ್ಲಿ ಸಂಘರ್ಷನಿರತ ಎರಡೂ ಸಮುದಾಯಗಳಿಗೆ ಸೇರಿದ ಹಲವು ಸದಸ್ಯರು ಮೃತಪಟ್ಟ ಬಳಿಕ ಅದರ ಪರಿಣಾಮ ರಾಜಧಾನಿಯಲ್ಲಿ ಮಾರ್ದನಿಸಿದೆ. ಸೋಮವಾರ, ಪೊಲೀಸ್ ಠಾಣೆಯೊಂದರಲ್ಲಿರುವ ಮೆತೈ ಪರಿಹಾರ ಶಿಬಿರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಬಳಿಕ, ಸಿಆರ್‌ಪಿಎಫ್ ಹಮರ್ ಸಮುದಾಯಕ್ಕೆ ಸೇರಿದ 10 ಮಂದಿಯನ್ನು ಗುಂಡಿಕ್ಕಿ ಕೊಂದಿತ್ತು.

ದಾಳಿಯ ಬಳಿಕ, ಪರಿಹಾರ ಶಿಬಿರದಲ್ಲಿದ್ದ ಎಂಟು ಮಂದಿ ನಾಪತ್ತೆಯಾಗಿದ್ದರು. ಸ್ವಲ್ಪವೇ ಹೊತ್ತಿನ ಬಳಿಕ ಇಬ್ಬರು ವಯೋವೃದ್ಧರ ಮೃತದೇಹಗಳು ಪತ್ತೆಯಾಗಿದ್ದವು. ಆದರೆ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಅವರನ್ನು ಅಪಹರಿಸಲಾಗಿತ್ತು ಎಂದು ಹೇಳಲಾಗಿತ್ತು. ಶುಕ್ರವಾರ, ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ದೇಹಗಳು ಪತ್ತೆಯಾಗಿವೆ.

             ಅದೇ ವೇಳೆ, ಎಲ್ಲಾ ಪ್ರಮುಖ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾಯಿಸುವಂತೆ ಶನಿವಾರ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಸೂಚಿಸಿದೆ.

''ರಾಷ್ಟ್ರವಿರೋಧಿ ಮತ್ತು ಸಮಾಜವಿರೋಧಿ ಶಕ್ತಿಗಳ ಸಂಚು ಮತ್ತು ಚಟುವಟಿಕೆಗಳನ್ನು ವಿಫಲಗೊಳಿಸಲು ಹಾಗೂ ಶಾಂತಿ ನೆಲೆಸುವಂತೆ ಮಾಡಲು ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ'' ಎಂದು ರಾಜ್ಯ ಸರಕಾರ ತಿಳಿಸಿದೆ. ಇಂಟರ್‌ನೆಟ್ ಸ್ಥಗಿತಗೊಂಡಿರುವ ಜಿಲ್ಲೆಗಳೆಂದರೆ- ಇಂಫಾಲ ಪಶ್ಚಿಮ, ಇಂಫಾಲ ಪೂರ್ವ, ಬಿಷ್ಣುಪುರ, ತೌಬಲ್, ಕಕ್ಚಿಂಗ್, ಕಂಗ್‌ಪೊಕ್ಪಿ ಮತ್ತು ಚುರಚಾಂದ್‌ಪುರ್.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries