ಶ್ರೀನಗರ: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕೈಗೊಂಡಿರುವ ನಿರ್ಣಯವನ್ನು ವಿರೋಧಿಸಿ ಬಿಜೆಪಿ ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಮೂರನೇ ದಿನವೂ ಗದ್ದಲ ಮುಂದುವರಿಸಿದರು.
ಶುಕ್ರವಾರದ ಕಲಾಪವು ಸದಸ್ಯರ ಮಧ್ಯದ ತೀವ್ರ ಮಾತಿನ ಚಕಮಕಿ, ಸದಸ್ಯರ ನಡುವಿನ ಎಳೆದಾಟಕ್ಕೂ ಸಾಕ್ಷಿಯಾಯಿತು.
ತಕ್ಷಣವೇ, ವಿರೋಧ ಪಕ್ಷಗಳಾದ ಬಿಜೆಪಿ, ಪೀಪಲ್ಸ್ ಕಾನ್ಫರೆನ್ಸ್, ಪಿಡಿಪಿ ಹಾಗೂ ಎಐಪಿ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಬಿಜೆಪಿ ಶಾಸಕರು ಸ್ಪೀಕರ್ ಪೀಠದ ಮುಂಭಾಗ ಪ್ರತಿಭಟನೆ ನಡೆಸಿದರು. 'ಪಾಕಿಸ್ತಾನಿ ಅಜೆಂಡಾ ನಹೀ ಚಲೇಗಿ' (ಪಾಕಿಸ್ತಾನದ ಅಜೆಂಡಾವು ಇಲ್ಲಿ ನಡೆಯುವುದಿಲ್ಲ) ಎಂಬ ಘೋಷಣೆ ಕೂಗಿದರು.
ಗದ್ದಲವು ನಿಯಂತ್ರಣಕ್ಕೆ ಬಾರದಿದ್ದಾಗ, ಸ್ಪೀಕರ್ ರಾಥರ್ ಅವರು ಬಿಜೆಪಿಯ 12 ಶಾಸಕರನ್ನು ಸದನದಿಂದ ಹೊರಹಾಕಲು ಮಾರ್ಷಲ್‌ಗಳಿಗೆ ಆದೇಶಿಸಿದರು. ಈ ಬಳಿಕ, ಬಿಜೆಪಿಯ ಉಳಿದ 11 ಶಾಸಕರು ಸದನದಿಂದ ಹೊರನಡೆದರು.
ಒಬ್ಬರನ್ನೊಬ್ಬರು ಎಳೆದಾಡಿಕೊಂಡ ಶಾಸಕರು: ಶಾಸಕ ಖುರ್ಷೀದ್ ಅವರು, '370 ಹಾಗೂ 35ಎ ವಿಧಿಯನ್ನು ಮರುಸ್ಥಾಪಿಸಲು ಆಗ್ರಹಿಸುತ್ತೇವೆ. ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ' ಎಂಬ ಬರಹವಿದ್ದ ಬ್ಯಾನರ್ ಅನ್ನು ಪ್ರದರ್ಶಿಸಿದರು. ಇದರಿಂದ ಪ್ರಚೋದನೆಗೊಂಡ ಬಿಜೆಪಿ ಶಾಸಕರು, ಖುರ್ಷೀದ್ ಅವರನ್ನು ಎಳೆದಾಡಿದರು. ಬಳಿಕ ಖುರ್ಷೀದ್ ಅವರನ್ನು ಸದನದಿಂದ ಹೊರಹಾಕಲಾಯಿತು.
370ನೇ ವಿಧಿಯಡಿ ವಿಶೇಷ ಸ್ಥಾನವನ್ನು ಮರುಸ್ಥಾಪಿಸುವ ನಿರ್ಣಯವನ್ನು ವಿಧಾನಸಭೆಯು ಧ್ವನಿ ಮತದ ಮೂಲಕ ಬುಧವಾರವೇ ಅಂಗೀಕರಿಸಿದೆ.
ಅನಿರ್ದಿಷ್ಟಾವಧಿ ಮುಂದೂಡಿಕೆ: ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಶುಕ್ರವಾರ ಅಂಗೀಕರಿಸಲಾಯಿತು. ಇದಾದ ಬಳಿಕ ವಿಧಾನಸಭೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಸೋಮವಾರ ಆರಂಭಗೊಂಡಿದ್ದ ಅಧಿವೇಶನವು ಗದ್ದಲದಲ್ಲಿಯೇ ಮುಕ್ತಾಯವಾಯಿತು.
ಬಿಜೆಪಿ ಶಾಸಕರ ಅಣಕು ಕಲಾಪ
ಮಾರ್ಷಲ್‌ಗಳು ಬಿಜೆಪಿಯ ಕೆಲವು ಶಾಸಕರನ್ನು ಸದನದಿಂದ ಹೊರಹಾಕಿದ ಬಳಿಕ ಬಿಜೆಪಿಯ ಉಳಿದ ಶಾಸಕರು ಸದನದಿಂದ ಹೊರ ನಡೆದರು. ಈ ಬಳಿಕ ಎಲ್ಲ ಬಿಜೆಪಿ ಶಾಸಕರು ವಿಧಾನಸಭೆ ಕಟ್ಟಡ ಮುಂಭಾಗ ಅಣಕು ಕಲಾಪ ನಡೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಶಾಸಕರು 'ವಿಶೇಷ ಸ್ಥಾನವನ್ನು ಮರಳಿ ಸ್ಥಾಪಿಸುವ ಕುರಿತ ನಿರ್ಣವು ಅಕ್ರಮವಾಗಿದೆ ಹಾಗೂ ಅಸಾಂವಿಧಾನಿಕವಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಸದನವನ್ನು ಹೈಜಾಕ್ ಮಾಡಿದೆ. ಇದನ್ನು ವಿರೋಧಿಸಿ ಈ ಅಣಕು ಕಲಾಪವನ್ನು ನಡೆಸಲಾಗುತ್ತಿದೆ' ಎಂದರು.
ಸುನಿಲ್ ಶರ್ಮಾ, ವಿಧಾನಸಭೆ ವಿರೋಧ ಪಕ್ಷದ ನಾಯಕಇದು ಪ್ರಜಾಪ್ರಭುತ್ವದ ಕರಾಳ ದಿನ. ನಿಷ್ಪಕ್ಷಪಾತವಾಗಿ ಸ್ಪೀಕರ್ ವರ್ತಿಸುತ್ತಿಲ್ಲ. ಅವರು ನ್ಯಾಷನಲ್ ಕಾನ್ಫರೆನ್ಸ್‌ನ ಸ್ಪೀಕರ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಮಾರ್ಷಲ್ ಕಾನೂನು ಬಳಸಿ ಕಳೆದ ಮೂರು ದಿನಗಳಿಂದ ವಿರೋಧ ಪಕ್ಷದ ಧ್ವನಿಯನ್ನು ಸ್ಪೀಕರ್ ಅಡಗಿಸಲು ಯತ್ನಿಸುತ್ತಿದ್ದಾರೆ