ಭುವನೇಶ್ವರ: ಬಿಹಾರ ದಂಪತಿ ₹40 ಸಾವಿರಕ್ಕೆ 4 ವರ್ಷದ ಮಗಳನ್ನು ಒಡಿಶಾದ ಪೀಪ್ಲಿ ಪ್ರದೇಶದಲ್ಲಿರುವ ಮಕ್ಕಳಿಲ್ಲದ ದಂಪತಿಗೆ ಮಾರಿರುವ ಪ್ರಕರಣ ಬುಧವಾರ ವರದಿಯಾಗಿದೆ.
ಮಗುವನ್ನು ರಕ್ಷಿಸಿರುವ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಮಗು ಹೆತ್ತ ಪಾಲಕರು, ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿಗಳಿಬ್ಬರು ಸೇರಿದ್ದಾರೆ.
ಭುವನೇಶ್ವರದ ಮನೆ ಮಾಲೀಕ ಸಾರ್ಥಕ್ ಮೊಹಾಂತಿ ಎಂಬುವವರು ತಮ್ಮ ಮನೆಯಲ್ಲಿ ಬಾಡಿಗೆಗೆ ಇರುವ ದಂಪತಿಗೆ ಬಿಹಾರದ ದಂಪತಿ ತಮ್ಮ ಮಗುವನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಬಡಾಗಾಡಾ ಪೊಲೀಸರು ದಾಳಿ ನಡೆಸಿದ್ದರು. ಮಗುವನ್ನು ₹40 ಸಾವಿರಕ್ಕೆ ಮಾರಾಟ ಮಾಡಿರುವುದನ್ನು ದಂಪತಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಮಾರಿದ ದಂಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕಿಯು ತನ್ನ ತಂದೆಯ ಮೊದಲ ಪತ್ನಿಯ ಮಗಳು ಎಂದು ಚೈಲ್ಡ್‌ಲೈನ್ ನಿರ್ದೇಶಕ ಬೇಣುಧರ ಸೇನಾಪತಿ ತಿಳಿಸಿದ್ದಾರೆ.